ಮೇಲ್ಮನೆ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ?

Update: 2021-01-27 16:05 GMT

ಬೆಂಗಳೂರು, ಜ.27: ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ವಿರುದ್ಧ ಬಿಜೆಪಿ-ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿರುವುದರಿಂದ ಮುಂದಿನ ಸಭಾಪತಿ ಹುದ್ದೆಗೆ ಜೆಡಿಎಸ್ ಹಿರಿಯ ಮುಖಂಡರು ಆಗಿರುವ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟು ಕೊಡುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಬಸವರಾಜ ಹೊರಟ್ಟಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತುಕತೆ ನಡೆಸಿದ್ದು, ಬಿಜೆಪಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವರಿಷ್ಟರಿಂದಲೂ ಬಸವರಾಜ ಹೊರಟ್ಟಿ ಆಯ್ಕೆಗೆ ಹಸಿರು ನಿಶಾನೆ ತೋರಿಸಿದ್ದಾರೆಂದು ತಿಳಿದುಬಂದಿದೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡರ ಸೂಚನೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಸಭಾಪತಿ ಸ್ಥಾನದ ಕುರಿತಂತೆ ಚರ್ಚೆ ನಡೆಸಿದ್ದೇನೆ. ಜೆಡಿಎಸ್‍ಗೆ ಸಭಾಪತಿ ಸ್ಥಾನ ಕೊಡುವುದರ ಬಗ್ಗೆ ಬಿಜೆಪಿಯಲ್ಲೂ ಸಹಮತ ವ್ಯಕ್ತವಾಗಿರುವುದು ಚರ್ಚೆಯ ವೇಳೆ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಎಚ್.ಡಿ.ದೇವೇಗೌಡರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಏನು ತೀರ್ಮಾನ ಕೈಗೊಳ್ಳುತ್ತಾರೆಂಬುದನ್ನು ಕಾದುನೋಡಿ, ಮುಂದಿನ ದಾರಿ ಬಗ್ಗೆ ಚಿಂತಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

ರಾಜೀನಾಮೆ ಸಾಧ್ಯತೆ: ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನೋಟಿಸ್ ಮತ್ತೊಮ್ಮೆ ನೀಡಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂಬ ಕುತೂಹಲ ಸೃಷ್ಟಿಸಿದೆ. ಸಭಾಪತಿ ವಿಚಾರಕ್ಕೆ ಡಿ.15ರಂದು ಪರಿಷತ್‍ನಲ್ಲಿ ಕೋಲಾಹಲವೇ ನಡೆದಿತ್ತು.
ಆ ಬಳಿಕ ಸದನದಲ್ಲಿ ನಡೆದ ಘಟನೆಯ ಬಗ್ಗೆ ವರದಿ ನೀಡಲು ಹಿರಿಯ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸದನ ಸಮಿತಿ ಪ್ರತಾಪಚಂದ್ರ ಶೆಟ್ಟಿ ರಚಿಸಿದ್ದರು. ಸದನ ಸಮಿತಿ ಮಧ್ಯಂತರ ವರದಿಯನ್ನು ನೀಡಿದೆ. ಇದೀಗ ಮತ್ತೆ ಬಿಜೆಪಿ ಸಭಾಪತಿ ವಿರುದ್ಧ ಅವಿಶ್ವಾಸ ನೋಟಿಸ್ ನೀಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜ.28ರಿಂದ ಫೆ.5ರವರೆಗೆ ವಿಧಾನ ಮಂಡಲ ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣದ ಬಳಿಕ ಮೇಲ್ಮನೆ ಕಲಾಪದಲ್ಲಿ ಸಭಾಪತಿ ಸ್ಥಾನದ ಕುರಿತು ಚರ್ಚೆ ನಡೆಯಲಿದ್ದು, ನೂತನ ಸಭಾಪತಿ ಆಯ್ಕೆ ವಿಚಾರಕ್ಕೂ ಸ್ಪಷ್ಟತೆ ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News