ದಿಲ್ಲಿ ರೈತರ ಚಳವಳಿ ಹಿಂದೆ ದೇಶದ್ರೋಹಿ ಶಕ್ತಿಗಳಿವೆ: ಶೋಭಾ ಕರಂದ್ಲಾಜೆ

Update: 2021-01-27 16:24 GMT

ಚಿಕ್ಕಮಗಳೂರು, ಜ.27: ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ ಎಂಬುದಕ್ಕೆ ಮಂಗಳವಾರ ನಡೆದ ಘಟನೆಯೇ ಸಾಕ್ಷಿಯಾಗಿದೆ.  ನಾವು ಆರಂಭದಿಂದಲೂ ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ, ಉಮರ್ ಖಾಲಿದ್ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದ ದೇಶದ್ರೋಹಿ ಶಕ್ತಿ ನೇತೃತ್ವ ವಹಿಸಿದೆ ಎಂದು ಹೇಳಿದ್ದೆವು, ಅದು ಈಗ ಸಾಬೀತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವದ ದಿನ ಕೆಟ್ಟ ಘಟನೆ ನಡೆದಿದೆ. ದಿಲ್ಲಿಯಲ್ಲಿ ಕೆಂಪುಕೋಟೆ ಹತ್ತಿದವರು ಯಾರೂ ರೈತರಲ್ಲ, ಅವರು ಕೆನಾಡದ ಖಲಿಸ್ತಾನ್ ಮೂವ್‍ಮೆಂಟ್‍ನವರು. ಅವರೂ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಕೆನಾಡದಲ್ಲಿ ಅವಿತುಕೊಂಡು ಇಲ್ಲಿಯ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಉಮರ್ ಖಾಲಿದ್‍ಗೆ ಬೆಂಬಲ ಕೊಟ್ಟಿದ್ದವರು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡಿದವರನ್ನು ಜೋಡಿಸಿಕೊಳ್ಳಲಾಗಿದೆ. ಜೆಎನ್‍ಯು ವಿವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಜೋಡಣೆಯಾಗಿದ್ದಾರೆ. ನಾವು ಇದನ್ನು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು, ಇಂದು ಸಾಬೀತಾಗಿದೆ ಎಂದರು.

ನಿಜವಾದ ರೈತರು ಇಂತಹ ಕೃತ್ಯ ನಡೆಸಲು ಸಾಧ್ಯವೇ ಇಲ್ಲ. ರೈತರ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ರೈತರನ್ನು ಕೇಂದ್ರ ಸರಕಾರ ಮಾತುಕತೆಗೆ ಕರೆದಿದ್ದು, ಬೇಡಿಕೆ ಈಡೇರಿಸಲು ಸರಕಾರ ಬದ್ಧವಿದೆ. ದಿಕ್ಕು ತಪ್ಪಿಸುವರು ಇರುತ್ತಾರೆ, ಅದಕ್ಕೆ ನಿಜವಾದ ರೈತರು ಬಲಿಯಾಗಬಾರದು, ಮಾತುಕತೆಗೆ ಬನ್ನಿ ಎಂದು ಮನವಿ ಮಾಡಿದರು. 

ಹಿಂದೆ ಈ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡಿತ್ತು,  ಇಂದು ಬಿಜೆಪಿ ಸರಕಾರ ಜಾರಿಗೆ ತಂದಿದೆ. ಆದರೂ ಉಗ್ರವಾದ ಹೋರಾಟ ನಡೆಯುತ್ತಿದೆ ಎಂದರೆ ಕಾಣದ ಕೈಗಳ ಪಿತೂರಿ ಇದೆ. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗೆ ಹಣ ಸಂದಾಯ ಆಗುತ್ತಿದೆ ಎಂಬುದರ ಬಗ್ಗೆ ಹಾಗೂ ಇದರ ಹಿಂದಿರುವ ಶಕ್ತಿಗಳ ತನಿಖೆಯಾಗಬೇಕು ಎಂದರು.

ಸಚಿವ ಆರ್.ಅಶೋಕ್ ಆಪ್ತ ಸಹಾಯಕ ಲಂಚಕ್ಕೆ ಬೇಡಿಕೆ ಪ್ರಕರಣ ತನಿಖೆಯಾಗಬೇಕು. ಈ ರೀತಿ ಭ್ರಷ್ಟಾಚಾರ ಮತ್ತು ಸರಕಾರ ಜನಸೇವೆಗೆ ನೀಡಿದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುಕ್ಕೆ ಬಳಸಿಕೊಂಡಿರುವುದು ನಿಜವಾದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮವೂ ಆಗಬೇಕು.
-ಶೋಭಾ ಕರಂದ್ಲಾಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News