ಯುವತಿಯನ್ನು ಬಳಸಿ ಹನಿಟ್ರ್ಯಾಪ್: ಖಾಸಗಿ ಸುದ್ದಿವಾಹಿನಿಯ ಮಾಲಕ ಸೇರಿ ನಾಲ್ವರು ಸೆರೆ

Update: 2021-01-27 17:28 GMT

ಬೆಂಗಳೂರು, ಜ.27: ಉದ್ಯಮಿವೊಬ್ಬರನ್ನು ಗುರಿಯಾಗಿಸಿ ಹನಿಟ್ರ್ಯಾಪ್‍ಗೆ ಸಿಲುಕಿಸಿ ಹಣ ವಸೂಲಿ ಮಾಡಿದ ಆರೋಪದಡಿ ಸ್ಪೀಡ್ ಕನ್ನಡ ಸುದ್ದಿವಾಹಿನಿಯ ಮಾಲಕ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೀರೇಶ್ ಎಂಬಾತ ಬಂಧಿತ ಆರೋಪಿ ಸ್ಪೀಡ್ ಕನ್ನಡ ಸುದ್ದಿವಾಹಿನಿಯ ಮಾಲಕ ಎನ್ನಲಾಗಿದ್ದು, ಈತನೊಂದಿಗೆ ಕೃತ್ಯಕ್ಕೆ ಕೈಜೋಡಿಸಿದ ಆರೋಪದಡಿ ಜಾನ್ ಕೆನಡಿ, ನಿರ್ಮಲ್, ಬಾಬು ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ತಮಿಳುನಾಡಿನ ಮೂಲದ ಉದ್ಯಮಿ ಶೇಖರ್ ಎಂಬವರು ಕೆಲಸದ ಸಲುವಾಗಿ 2019ರಲ್ಲಿ ಸೆಪ್ಟೆಂಬರ್‍ನಲ್ಲಿ ನಗರದ ಖಾಸಗಿ ಹೋಟೆಲ್‍ವೊಂದರಲ್ಲಿ ತಂಗಿದ್ದರು. ಈ ವೇಳೆ ಯುವತಿ ಒಬ್ಬಾಕೆ ಅವರೊಂದಿಗೆ ಅಶ್ಲೀಲವಾಗಿ ನಡೆದುಕೊಂಡು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಳು. ಇದಾದ ಬಳಿಕ 2020ರ ಮಾರ್ಚ್‍ನಲ್ಲಿ ನಂದಿನಿ ಹೆಸರಿನಲ್ಲಿ ಯುವತಿ ಕರೆ ಮಾಡಿ ವಾಟ್ಸ್ ಆಪ್‍ನಲ್ಲಿ ಅಶ್ಲೀಲ ಚಿತ್ರ ಕಳುಹಿಸಿ 20 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದಾರೆ. ಇಲ್ಲದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ತದನಂತರ, ಈಕೆ ಸ್ಪೀಡ್ ಸುದ್ದಿವಾಹಿನಿ ಮಾಲಕ ವೀರೇಶ್‍ನನ್ನು ಪರಿಚಯಿಸಿಕೊಂಡು 80 ಲಕ್ಷ ರೂ. ನೀಡುವಂತೆ ಉದ್ಯಮಿಗೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಹಂತ-ಹಂತವಾಗಿ 34 ಲಕ್ಷ ರೂ. ನೀಡುವುದಾಗಿ ಉದ್ಯಮಿ ತಿಳಿಸಿದರೂ, ನಿರಂತರ ಕರೆ ಮಾಡಿ ಬೆದರಿಕೆವೊಡ್ಡಿದ್ದಾರೆ ಎಂದು ಉದ್ಯಮಿ ಶೇಖರ್ ನಗರ ಕೇಂದ್ರ ಸಿಎಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಕುರಿತು ಸಿಎಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು, ಕೃತ್ಯದಲ್ಲಿ ಭಾಗಿಯಾದ ಯುವತಿ ನಾಪತ್ತೆಯಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News