ಹುಣಸೋಡು ಸ್ಪೋಟ: ಸಚಿವ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಪತ್ರ

Update: 2021-01-27 17:56 GMT

ಶಿವಮೊಗ್ಗ,ಜ.27: ಸಚಿವ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಪ್ರಧಾನಮಂತ್ರಿಗೆ ಪತ್ರ ಬರೆಯಲಾಗಿದೆ.

ನಗರದ ಹೊರವಲಯದ ಹುಣಸೋಡು ಕಲ್ಲು ಕ್ವಾರಿಯಲ್ಲಿ ನಡೆದ ಸ್ಪೋಟದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಮೇಲೆ ಜವಾಬ್ದಾರಿ ವಹಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.

ಹುಣಸೋಡಿನಲ್ಲಿ ಸ್ಪೋಟಕಗಳ ಸ್ಪೋಟದಿಂದಾಗಿ 6 ಜನ ಮೃತಪಟ್ಟಿದ್ದಾರೆ. ಕಲ್ಲು ಕ್ವಾರಿ ಗಣಿಗಾರಿಕೆಗಾಗಿ ತರಲಾದ ಭಾರಿ ಪ್ರಮಾಣದ ಸ್ಪೋಟಕಗಳು ಸ್ಪೋಟಗೊಂಡು ಅದರ ತೀವ್ರತೆಗೆ ಶಿವಮೊಗ್ಗ ಜನ ನಿದ್ದೆಯಿಲ್ಲದ ರಾತ್ರಿ ಕಳೆಯುವಂತಾಗಿತ್ತು. ಸುಮಾರು 200 ಕಿ.ಮೀ. ವರೆಗೂ ಶಬ್ಧಕೇಳಿ ಬಂದಿತ್ತು. ಇದು ಪರಿಸರದ ಮೇಲೆ ತೀವ್ರ ಪರಿಣಾಮ ಭೀರುತ್ತಿದೆ. ಆದರೆ ಯಾವುದೇ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಲಾಗಿದೆ.

ಅಧಿಕಾರಿಗಳ ವೈಪಲ್ಯಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣರಾಗಿದ್ದಾರೆ. ಅಕ್ರಮ ಗಣಿಗಾರಿಕೆ, ಸ್ಪೋಟದ ವಿರುದ್ದ ಕ್ರಮಕೈಗೊಳ್ಳದಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಮೌನವಾಗಿದ್ದಾರೆ. ಶಿವಮೊಗ್ಗ ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಚಟುವಟಿಗಳ ಬಗ್ಗೆ ಸಚಿವರ ನಿರ್ದೇಶನ ವಿದ್ದ ಕಾರಣ ಅಧಿಕಾರಿಗಳು ಮೌನವಾಗಿಬಿಟ್ಟರು. ಇದರ ಪರಿಣಾಮ 6 ಮುಗ್ಧ ಕಾರ್ಮಿಕರ ಸಾವಿಗೆ ಕಾರಣವಾಯಿತು ಎಂದು ಹೇಳಲಾಗಿದೆ.

ಘಟನೆಯ ನಂತರ ಸಚಿವ ಕೆ.ಎಸ್. ಈಶ್ವರಪ್ಪ ಎಲ್ಲಾ ಅಕ್ರಮ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡತೊಡಗಿದ್ದಾರೆ ಇದು ನಾಟಕವಲ್ಲದೇ ಮತ್ತೇನೂ ಅಲ್ಲ. ಹಾಗಾಗಿ ಬಿಜೆಪಿ ಶಾಸಕ ಮತ್ತು ಸಚಿವರಾದ ಈಶ್ವರಪ್ಪನವರನ್ನೇ ಇದಕ್ಕೆ ಜವಾಬ್ದಾರಿಯನ್ನಾಗಿ ಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪತ್ರ ಬರೆದು ಮನವಿ ಮಾಡಲಾಗಿದೆ.

ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ ಕುಮಾರ್ ಮತ್ತು ಪದಾಧಿಕಾರಿಗಳು ಪತ್ರ ಬರೆದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News