ಹನ್ನೊಂದು ವಿಧೇಯಕಗಳ ಮಂಡನೆ: ಸ್ಪೀಕರ್ ಕಾಗೇರಿ

Update: 2021-01-27 18:08 GMT

ಬೆಂಗಳೂರು, ಜ. 27: ರಾಜ್ಯಪಾಲ ವಜೂಭಾಯಿ ವಾಲಾ ಅವರ ಭಾಷಣದ ಮೂಲಕ ವಿಧಾನ ಮಂಡಲ ಜಂಟಿ ಅಧಿವೇಶನ ಕಲಾಪ ನಾಳೆ(ಜ.28)ಯಿಂದ ಆರಂಭವಾಗಲಿದ್ದು, ಪ್ರಶ್ನೋತ್ತರ ಕಲಾಪ, ವಿಧೇಯಕಗಳ ಮಂಡನೆ ಸೇರಿದಂತೆ ವಿವಿಧ ವಿಚಾರಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.28ರ ಬೆಳಗ್ಗೆ 11ಗಂಟೆಗೆ ರಾಜ್ಯಪಾಲರು ರಾಜಭವನದಿಂದ ವಿಧಾನಸೌಧಕ್ಕೆ ಆಗಮಿಸಲಿದ್ದು, ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆ ಬಳಿಕ ಪರಿಷತ್ ಉಪಸಭಾಪತಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು ಎಂದರು.

‘ಅಧ್ಯಾದೇಶ'(ಸುಗ್ರೀವಾಜ್ಞೆ)ದ ಮೂಲಕ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಒಟ್ಟು ಹನ್ನೊಂದು ವಿಧೇಯಕಗಳು ನಮ್ಮ ಮುಂದಿವೆ. ಅದಷ್ಟು ಶೀಘ್ರ ವಿಧೇಯಕಗಳನ್ನು ಕಳುಹಿಸಿಕೊಡಲು ಸೂಚನೆ ನೀಡಲಾಗಿದೆ. ಇದರಿಂದ ಸದಸ್ಯರಿಗೆ ವಿಧೇಯಕದ ಪ್ರತಿ ಮೊದಲೇ ನೀಡಿದರೆ ಚರ್ಚೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

‘ಒಂದು ದೇಶ-ಒಂದು ಚುನಾವಣೆ' ವಿಚಾರದ ಚರ್ಚೆ ಕಳೆದ ಅಧಿವೇಶನದಲ್ಲಿ ನಡೆಯಬೇಕಿತ್ತು. ಗ್ರಾ.ಪಂ.ಚುನಾವಣೆ ಹಿನ್ನೆಲೆ ಮೊಟಕುಗೊಂಡಿತ್ತು. ಇದರಿಂದ ಈ ವಿಷಯದ ಚರ್ಚೆಗೆ ಎಲ್ಲ ನಾಯಕರೂ ಆಸಕ್ತಿ ತೋರಿಸಿದ್ದು, ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ದಿನಾಂಕ ನಿಗದಿಪಡಿಸುತ್ತೇವೆ ಎಂದು ಸ್ಪೀಕರ್ ತಿಳಿಸಿದರು.

ಸಾರ್ವಜನಿಕ ಪ್ರವೇಶ ಇಲ್ಲ: ಜಂಟಿ ಅಧಿವೇಶನ ವೀಕ್ಷಣೆಗೆ ಈ ಬಾರಿಯೂ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಮಾಸ್ಕ್ ಕಡ್ಡಾಯ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಆರ್‍ಟಿಪಿಸಿಆರ್ ತಪಾಸಣೆ ಕಡ್ಡಾಯವಲ್ಲ. ಆದರೆ, ಅನಾರೋಗ್ಯ ಇರುವವರು ಹಾಜರಾಗದಿರುವುದು ಉತ್ತಮ ಎಂದು ಅವರು ಸೂಚಿಸಿದರು.

ಕೋವಿಡ್-19 ಸೋಂಕು ನಿಯಂತ್ರಣ ದೃಷ್ಟಿಯಿಂದ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿನಿತ್ಯ ಅಧಿವೇಶನ ಮುಕ್ತಾಯದ ಬಳಿಕ ವಿಧಾನಸಭೆ ಸಭಾಂಗಣ ಹಾಗೂ ಸುತ್ತಮುತ್ತಲಿನ ಎಲ್ಲ ಆವರಣಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಪ್ಪುಚುಕ್ಕೆ: ಗಣರಾಜ್ಯೋತ್ಸವ ಸಂಭ್ರಮದ ಮಧ್ಯೆ ನಿನ್ನೆ ಹೊಸದಿಲ್ಲಿಯಲ್ಲಿ ನಡೆದ ಘಟನೆ ಕಪ್ಪುಚುಕ್ಕೆ. ನಮ್ಮ ಅಗತ್ಯ ಪೂರೈಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಆದರೆ, ನಿನ್ನೆಯ ಘಟನೆ ದೇಶದ ಜನರಿಗೆ ಘಾಸಿಯನ್ನುಂಟು ಮಾಡಿದೆ. ಈ ಘಟನೆಯನ್ನು ಖಂಡಿಸುತ್ತೇನೆ ಎಂದು ಸ್ಪೀಕರ್ ಕಾಗೇರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News