ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಎಚ್.ವಿಶ್ವನಾಥ್‍ಗೆ ಮುಖಭಂಗ

Update: 2021-01-28 12:02 GMT

ಬೆಂಗಳೂರು, ಜ.28: ನಾಮ ನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ನೀಡುವುದು ಅಸಾಧ್ಯ ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ ನಾಯಕ ಎಚ್.ವಿಶ್ವನಾಥ್‍ಗೆ ಭಾರೀ ಮುಖಭಂಗವಾಗಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಎಚ್.ವಿಶ್ವನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದ ವಿಶ್ವನಾಥ್ ಅವರಿಗೆ ತೀವ್ರ ನಿರಾಸೆಯಾಗಿದೆ. 

ಆರ್ಟಿಕಲ್ 164(1ಬಿ), 361 ಬಿ ಅಡಿ ಎಚ್.ವಿಶ್ವನಾಥ್ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ಈ ಹಿಂದೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಉಳಿದ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್‍ರನ್ನು ಅರ್ಹರು ಎಂದು ಪರಿಗಣಿಸಿತ್ತು. ಇವರಿಬ್ಬರು ಸಂವಿಧಾನದಡಿಯಲ್ಲಿ ಮರು ಆಯ್ಕೆಯಾಗಿರುವುದರಿಂದಾಗಿ ಅನರ್ಹರಾಗಿಲ್ಲ ಎಂದು ಕೋರ್ಟ್ ತಿಳಿಸಿತ್ತು.

ಪರಿಚ್ಛೇದ 164(1ಬಿ) ಪ್ರಕಾರ ಯಾವುದೇ ಪಕ್ಷಕ್ಕೆ ಸೇರಿದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯ ಅನರ್ಹತೆಗೊಳಗಾದರೆ, ಆತ ಅನರ್ಹಗೊಂಡ ದಿನದಿಂದ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಅಥವಾ ಚುನಾವಣೆಗಳನ್ನು ಎದುರಿಸಿ ವಿಧಾನಸಭೆ ಅಥವಾ ವಿಧಾನಪರಿಷತ್‍ಗೆ ಮರು ಆಯ್ಕೆಯಾಗುವವರೆಗೆ ಸಚಿವ ಸ್ಥಾನ ಪಡೆಯಲು ಸಾಧ್ಯವಿಲ್ಲ.

ಪರಿಚ್ಛೇದ 361 (ಬಿ) ಪ್ರಕಾರ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯ ಅನರ್ಹಗೊಂಡಲ್ಲಿ ಮರು ಆಯ್ಕೆಯಾಗುವವರೆಗೆ ಸಂಭಾವನೆ ಪಡೆಯುವಂಥ ರಾಜಕೀಯ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ವೇತನ ಅಥವಾ ಸಂಭಾವನೆಯಾಗಿ ನೀಡುವಂತಹ ಹುದ್ದೆಗಳಿಗೆ ಅವರನ್ನು ನೇಮಕ ಮಾಡುವಂತಿಲ್ಲ.

ಪ್ರಕರಣವೇನು: ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರು ಎಂಟಿಬಿ ನಾಗರಾಜ್, ಆರ್.ಶಂಕರ್, ವಿಶ್ವನಾಥ್ ಸೇರಿ ಒಟ್ಟು 17 ಶಾಸಕರನ್ನು ಹಾಲಿ ವಿಧಾನಸಭೆ ಮುಗಿಯುವವರೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತಾದರೂ, ವಿಧಾನಸಭೆ ಮುಗಿಯುವರೆಗೂ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅನರ್ಹರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಯ್ಕೆಯಾಗಬಹುದು ಎಂದು ತೀರ್ಪು ನೀಡಿತ್ತು. ಇದರಿಂದ, ವಿಶ್ವನಾಥ್ ಹುಣಸೂರಿನಿಂದ ಹಾಗೂ ಎಂಟಿಬಿ ನಾಗರಾಜ್ ಹೊಸಕೋಟೆಯಿಂದ ಸ್ಪರ್ಧಿಸಿದ್ದರಾದರೂ, ಚುನಾವಣೆಯಲ್ಲಿ ಸೋತಿದ್ದರು. ಆರ್.ಶಂಕರ್ ಯಾವುದೇ ಚುನಾವಣೆ ಎದುರಿಸಿರಲಿಲ್ಲ. ಬಳಿಕ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರನ್ನು ಬಿಜೆಪಿಯಿಂದ ಪರಿಷತ್‍ಗೆ ಆಯ್ಕೆ ಮಾಡಲಾಗಿತ್ತು. ವಿಶ್ವನಾಥ್ ಸಾಹಿತಿ ಕೋಟಾ ಅಡಿ ನಾಮನಿರ್ದೇಶನಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News