ಆದೇಶ ಪಾಲಿಸದ ಮಂಗಳೂರು ಪಾಲಿಕೆ ಆಯುಕ್ತ: ಹೈಕೋರ್ಟ್ ಅಸಮಾಧಾನ

Update: 2021-01-28 12:15 GMT

ಬೆಂಗಳೂರು, ಜ.28: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತದಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕವೂ ಪರಿಹಾರ ನೀಡದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಮಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿದ್ದ ವರದಿ ಪರೀಶಿಲಿಸಿದ ನ್ಯಾಯಪೀಠ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಘಟನೆಯಲ್ಲಿ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಪರಿಹಾರ ನೀಡಲು ನ್ಯಾಯಾಲಯ ಜ.21ರಂದು ಆದೇಶಿಸಿದ್ದರೂ ಆಯುಕ್ತರು ಪರಿಹಾರ ವಿತರಿಸಿಲ್ಲ. ಪರಿಹಾರ ಪಡೆದುಕೊಳ್ಳಬೇಕಿರುವ ಸಂತ್ರಸ್ತರ ಕುರಿತೂ ಸ್ಪಷ್ಟ ಮಾಹಿತಿ ನೀಡಿಲ್ಲ. ಯಾವುದೇ ಕಾರಣ ನೀಡಿ ಆಯುಕ್ತರು ನ್ಯಾಯಾಲಯವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಈ ರೀತಿ ನಡೆದುಕೊಳ್ಳುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸಂತ್ರಸ್ತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಪರಿಹಾರ ನೀಡುವ ಕುರಿತು ನಮ್ಮೊಂದಿಗೆ ಚರ್ಚಿಸಿಲ್ಲ. ಪಾಲಿಕೆಯೇ ತನಗಿಷ್ಟ ಬಂದಂತೆ ಪರಿಹಾರ ನಿಗದಿಪಡಿಸಿದೆ ಎಂದು ಪೀಠಕ್ಕೆ ತಿಳಿಸಿದರು. 

ಸರಕಾರಿ ಪರ ವಕೀಲರು ವಾದಿಸಿ, ಪರಿಹಾರ ವಿತರಿಸುವ ಭರವಸೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಘಟನೆಯಲ್ಲಿ 102 ಮಂದಿ ಸಂತ್ರಸ್ತರಿದ್ದಾರೆ ಎನ್ನಲಾಗಿದೆ. ಅದರಂತೆ ಪಾಲಿಕೆ ಸಂತ್ರಸ್ತರಿಗೆ ಪರಿಹಾರ ನೀಡಿ ಆ ಕುರಿತ ದಾಖಲೆಗಳನ್ನು ಅರ್ಜಿದಾರರಾದ ಕಾನೂನು ಸೇವಾ ಸಮಿತಿಗೆ ಸಲ್ಲಿಸಲಿ. ಈ ದಾಖಲೆಗಳನ್ನು ಅರ್ಜಿದಾರರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಪರಿಶೀಲಿಸಿ, ಪರಿಹಾರ ನೀಡಿರುವ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಎಂದು ನಿರ್ದೇಶಿಸಿತು.

ಅಲ್ಲದೇ, ಪರಿಹಾರ ವಿತರಿಸಿದ ಕುರಿತು ಪಾಲಿಕೆಯೂ ಪ್ರಮಾಣ ಪತ್ರ ಸಲ್ಲಿಸಲಿ ಎಂದು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು. ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಮಂಗಳೂರು ಸ್ಮಾರ್ಟ್ ಸಿಟಿ ಕಾರ್ಪೋರೇಷನ್‍ಗೆ ಕಮಿಷನರ್ ಆಗಿ ಪ್ರಶಾಂತ್ ಕುಮಾರ್ ನೇಮಕ ಮಾಡಿರುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News