ತೆರಿಗೆ ಸಂಗ್ರಹದಲ್ಲಿ ರಾಜ್ಯ ಮುಂಚೂಣಿ: ರಾಜ್ಯಪಾಲ ವಜೂಭಾಯಿ ವಾಲಾ

Update: 2021-01-28 14:08 GMT

►'ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ'
►'ಮೀನುಗಾರಿಕೆಯಲ್ಲಿ ವಾರ್ಷಿಕ ಸರಾಸರಿ ಶೇ.2.9ರಷ್ಟು ವೃದ್ಧಿ ದರ'
►'ಅತಿಹೆಚ್ಚು ಬೇಳೆಕಾಲು ಉತ್ಪಾದನೆಗಾಗಿ ಪ್ರಥಮ ಪ್ರಶಸ್ತಿ'

ಬೆಂಗಳೂರು, ಜ.28: ಕೊರೋನ ಸೋಂಕಿನ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಕ್ಷೀರಕ್ರಾಂತಿ ನಡೆದಿದ್ದು, ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಇದೀಗ ದೇಶದಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ಇಂದಿಲ್ಲಿ ರಾಜ್ಯ ಸರಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಸರಕಾರವು ನಾವೀನ್ಯತೆಯ ಸೂಚ್ಯಂಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ಸಾರ್ವಜನಿಕ ವ್ಯವಹಾರ ಸೂಚ್ಯಂಕದಲ್ಲಿ(ಬೆಳವಣಿಗೆ, ಸಮಾನತೆ ಹಾಗೂ ಸುಸ್ಥಿರತೆ) ನಾಲ್ಕನೆ ಸ್ಥಾನದಲ್ಲಿದೆ. 11 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ನಾವೂ ಮುಂಚೂಣಿಯಲ್ಲಿದ್ದೇವೆ ಎಂದು ಬಣ್ಣಿಸಿದರು.

ಕೊರೋನ ಸೋಂಕಿನ ಕಾಲಘಟ್ಟದಲ್ಲೂ ರಾಜ್ಯ ಅರ್ಥಿಕವಾಗಿ ಸಬಲವಾಗಿದ್ದು ದೇಶದ ಒಟ್ಟು ಆಂತರಿಕ ಉತ್ಪಾದನೆಗೆ ಶೇಕಡಾ 8ರಷ್ಟು ಪಾಲು ನೀಡಿದೆ ಹಾಗೂ ದೇಶದ ಮಾಹಿತಿ ತಂತ್ರಜ್ಞಾನ ರಫ್ತಿಗೆ ಶೇ.40ರಷ್ಟು ಕೊಡುಗೆ ನೀಡಿದ್ದೇವೆ. ರಾಜ್ಯವು ಮೀನುಗಾರಿಕೆಯಲ್ಲಿ ವಾರ್ಷಿಕ ಸರಾಸರಿ ಶೇ.2.9ರಷ್ಟು ವೃದ್ಧಿ ದರವನ್ನು ಸಾಧಿಸಿದೆ. ಬೇಳೆಕಾಳುಗಳ ಅತಿಹೆಚ್ಚು ಉತ್ಪಾದನೆಗಾಗಿ ಪ್ರಥಮ ಪ್ರಶಸ್ತಿ ಪಡೆದಿದ್ದೇವೆ ಎಂದು ತಿಳಿಸಿದರು.

30 ಸಾವಿರ ಕೋಟಿ ರೂ.ಗೂ ಅಧಿಕ ರಾಜಸ್ವ ಸಂಗ್ರಹ: ಕೋವಿಡ್ ಸಂಕಷ್ಟದ ನಡುವೆಯೂ ನನ್ನ ಸರಕಾರ ವಾಣಿಜ್ಯ ತೆರಿಗೆಗಳ ಇಲಾಖೆಯು 30,467 ಕೋಟಿ ರೂ.ಗಳ ತೆರಿಗೆ ಸಂಗ್ರಹಿಸಿದೆ. ಅಬಕಾರಿ ಇಲಾಖೆಯೂ 16,788 ಕೋಟಿ ರೂ.ಗಳ ರಾಜಸ್ವ ಸಂಗ್ರಹಿಸಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು ಸುಗಮವಾಗಿ ಮುಂದುವರಿಸಲು ಅನುಕೂಲವಾಗಿದೆ ಎಂದು ಅವರು ಹೇಳಿದರು.

ಮುಂದಿನ 5 ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ 5 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದ್ದು ಆ ಮೂಲಕ 20 ಲಕ್ಷ ಮಂದಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದ ಅವರು, ಸ್ಮಾರ್ಟ್‍ಸಿಟಿ ಯೋಜನೆಗೆ ಇದುವರೆಗೆ 7 ನಗರಗಳಿಗೆ 400 ಕೋಟಿ ರೂ.ಒದಗಿಸಲಾಗಿದ್ದು ಇನ್ನೂ 6,233 ಕೋಟಿ ರೂ.ಗಳ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಸ್ವಯಂಚಾಲಿತ ದರ ಸಂಗ್ರಹಣೆಗಾಗಿ ಒಂದು ದೇಶ ಒಂದು ಕಾರ್ಡ್ ಯೋಜನೆಯನ್ನು ಬೆಂಗಳೂರು ಮೆಟ್ರೋ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಡಿಯಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ ಎಂದ ಅವರು, 2022ರ ವೇಳೆಗೆ 75 ಕಿ.ಮೀ ಮೆಟ್ರೋ ಮಾರ್ಗವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸರಕಾರದ ಮುನ್ನೋಟವನ್ನು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News