ಮಹಾರಾಷ್ಟ್ರ ಸಿಎಂ ಉದ್ಧಟತನ ಸಹಿಸುವುದಿಲ್ಲ: ಸಿದ್ದರಾಮಯ್ಯ

Update: 2021-01-28 12:37 GMT

ಬೆಂಗಳೂರು, ಜ.28: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಟತನ ಪ್ರದರ್ಶನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಜವಾಬ್ದಾರಿಯಿಂದ ಮಾತನಾಡಬೇಕು. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ನಮಗೆ ಬೆಳಗಾವಿ ಕರ್ನಾಟಕದ ಭಾಗ ಎಂದು ತಿಳಿಸಿದೆ. ಆ ಕುರಿತು ಯಾವುದೇ ವಿವಾದವೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಮ್ಮದು ಎಂಬುದು ಈಗಾಗಲೇ ತೀರ್ಮಾನವಾಗಿದೆ. ಅವರ ಉಳಿವಿಗೆ, ರಾಜಕೀಯ ಕಾರಣಕ್ಕೆ ಪದೇ ಪದೇ ಮಹಾರಾಷ್ಟ್ರ ಸಿಎಂ ಈ ವಿಷಯ ಕೆಣಕುತ್ತಾರೆ. ಇದು ಖಂಡನೀಯ. ಮಹಾರಾಷ್ಟ್ರ ಸಿಎಂ ಅವರ ಉದ್ಧಟನತ ವರ್ತನೆಯನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

ಪಕ್ಷಗಳ ಬಣ್ಣ ಬಯಲಾಗಲಿ: ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ನಮ್ಮ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ಆತ್ಮಸಾಕ್ಷಿ ಮತಗಳು ನಮಗೆ ಸಿಗಲಿವೆ ಎಂಬ ವಿಶ್ವಾಸವಿದೆ. ಜೆಡಿಎಸ್‍ನವರು ನಾವು ಜಾತ್ಯತೀತವಾದಿಗಳು ಎಂದು ಹೇಳಿಕೊಂಡು ಎಲ್ಲೆಡೆ ತಮಟೆ ಬಾರಿಸುತ್ತಾರೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ರಾಹುಲ್ ಗಾಂಧಿಯವರ ಮೂಲಕ ಸಿದ್ದರಾಮಯ್ಯ ಹೇಳಿಸಿದರು ಎಂದು ಜೆಡಿಎಸ್ ಮುಖಂಡರು ನನ್ನ ವಿರುದ್ಧ ಆರೋಪ ಮಾಡುತ್ತಾರೆ ಎಂದು ಅವರು ಕಿಡಿಗಾರಿದರು. 

ಯಾವ ರಾಜಕೀಯ ಪಕ್ಷಗಳ ನಿಲುವು ಏನು? ಅವರ ಬಣ್ಣ ಯಾವ ರೀತಿ ಬಯಲಾಗುತ್ತದೆ ಎಂಬುದನ್ನು ನೋಡಬೇಕಲ್ಲವೇ? ಹೀಗಾಗಿ ಉಪಸಭಾಪತಿ ಚುನಾವಣೆಗೆ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. 

ಬಿಜೆಪಿಯ ವಿಧಾನಪರಿಷತ್ ನಾಮ ನಿರ್ದೇಶಿತ ಸದಸ್ಯ ಎಚ್.ವಿಶ್ವನಾಥ್ ಮಂತ್ರಿಯಾಗಲು ಅನರ್ಹ ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ನ್ಯಾಯಾಲಯ ಕಾನೂನು, ಸಂವಿಧಾನದ ವಿಧಿ ವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News