ನನ್ನನ್ನು ರಾಜಕೀಯವಾಗಿ ಮುಗಿಸಲು ಮೂರು ಪಕ್ಷಗಳ ಷಡ್ಯಂತ್ರ: ಎಚ್.ವಿಶ್ವನಾಥ್ ಆರೋಪ

Update: 2021-01-28 12:39 GMT

ಬೆಂಗಳೂರು, ಜ. 28: ‘ನನ್ನನ್ನು ರಾಜಕೀಯವಾಗಿ ಮುಗಿಸಲು ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮೂರು ಪಕ್ಷಗಳಿಂದಲೂ ಷಡ್ಯಂತ್ರ ನಡೆದಿದೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಸುಪ್ರೀಂ ಕೋರ್ಟ್ ಆದೇಶದ ವಿಧಾನಸೌಧದಲ್ಲಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನಗೆ ಸಚಿವ ಸ್ಥಾನ ನೀಡುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ತೀರ್ಪಿನ ಪ್ರತಿಯನ್ನು ಪರಿಶೀಲಿಸಿ ನಮ್ಮ ವಕೀಲರ ಜೊತೆ ಚರ್ಚೆ ನಡೆಸುತ್ತೇನೆ. ಕಾನೂನು ಹೋರಾಟ ಮುಂದುವರಿಸಲಿದ್ದೇನೆ' ಎಂದು ಸ್ಪಷ್ಟಪಡಿಸಿದರು.

‘ನನ್ನನ್ನು ರಾಜಕೀಯವಾಗಿ ಶೂಟ್ ಮಾಡಲಾಗಿದೆ. ವಿಧಾನಸಭೆಯಿಂದ ಪರಿಷತ್‍ಗೆ ಆಯ್ಕೆಯಾಗುವ ಅವಕಾಶವಿದ್ದರೂ ತಪ್ಪಿಸಿದರು. ಯಾರಿಗೇ ಅದರೂ ಉಪಕಾರ ಸ್ಮರಣೆ ಇರಬೇಕು. ನಮ್ಮ ತ್ಯಾಗವನ್ನು ಎಂದೂ ಮರೆಯಬಾರದು. ಯಾರಿಂದ ಈ ಸರಕಾರ ಬಂದಿದೆ ಎಂಬುದನ್ನು ಅರಿಯಬೇಕು' ಎಂದು ವಿಶ್ವನಾಥ್, ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

‘ನಾನೂ ಇನ್ನೂ ಆರು ವರ್ಷ ವಿಧಾನ ಪರಿಷತ್ ಸದಸ್ಯನಾಗಿರುತ್ತೇನೆ. ಈ ವಿಧಾನಸಭೆಯ ಅವಧಿಯವರೆಗೆ ಮಾತ್ರ ಸಚಿವ ಸ್ಥಾನ ವಿಚಾರವಾಗಿ ನನಗೆ ತೊಡಕಾಗಬಹುದು. ಈ ಅವಧಿ ಮುಗಿದ ಬಳಿಕವಾದರೂ ಸಚಿವರಾಗಬಹುದು ಎಂದು ವಿಶ್ವನಾಥ್ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

‘ನಾವೂ ಅಂದು ಯಾರ ವಿರುದ್ಧ ಬಂಡೆದ್ದು ಬಂದಿದ್ದೆವೋ, ಇಂದು ಅವರ ಜೊತೆಯೇ ಕೂರುವಂತಾಗಿದೆ. ಏನೂ ಮಾಡೋದಕ್ಕೆ ಆಗುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ‘ರಾಜಕೀಯದಲ್ಲಿ ಇವೆಲ್ಲವೂ ಸಹಜ, ಇದು ಹೊಂದಾಣಿಕೆ ರಾಜಕೀಯ. ಇದು ನಮ್ಮ ಹೊಂದಾಣಿಕೆ ಅಲ್ಲ. ಮೇಲಿನವರ ಹೊಂದಾಣಿಕೆ. ಹೊಂದಾಣಿಕೆ ಕಷ್ಟವಾದರೂ ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ' ಎಂದು ತಮ್ಮ ಅಳಲು ತೊಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News