ನಿರಾಕ್ಷೇಪಣಾ ಪತ್ರದ ಆಧಾರದಲ್ಲಿ ಕೃಷಿ ಭೂಮಿ ಪರಿವರ್ತನೆ ಸಾಧ್ಯವಿಲ್ಲ: ಹೈಕೋರ್ಟ್ ಅಭಿಪ್ರಾಯ

Update: 2021-01-28 12:42 GMT

ಮಡಿಕೇರಿ ಜ.28 : ತಾಂತ್ರಿಕ ಸಮಿತಿ ನೀಡುವ ನಿರಾಕ್ಷೇಪಣಾ ಪತ್ರ(ಎನ್ ಒಸಿ)ವೊಂದನ್ನೇ ಆಧರಿಸಿ ಕೊಡಗು ಜಿಲ್ಲೆಯ ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಮಿತಿ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾಧಿಕಾರಿಗೆ ನೋಟೀಸ್ ನೀಡುವಂತೆ ಆದೇಶಿಸಿದೆ.

ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಎನ್‍ಒಸಿ ನೀಡುವ ಅಧಿಕಾರವನ್ನು ತಾಂತ್ರಿಕ ಸಮಿತಿಗೆ ನೀಡಲಾಗಿದ್ದು, ಇದು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ವಿರುದ್ಧವಾಗಿದೆ. ಅಲ್ಲದೆ ಇದರಿಂದ ಭೂ ಪರಿವರ್ತನೆ ಮಾಫಿಯಾ ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿ ಕೊಡಗು ವನ್ಯಜೀವಿ ಸಂಸ್ಥೆಯ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕೊಡಗು ಜಿಲ್ಲೆಯ ಆರ್ಥಿಕ ಸ್ಥಿತಿ ಪ್ರವಾಸೋದ್ಯಮವನ್ನು ಅವಲಂಬಿಸುವ ಮುನ್ಸೂಚನೆಗಳು ಕಾಣಿಸುತ್ತಿವೆ. ಹವಾಮಾನ ವೈಪರಿತ್ಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಾಫಿ ದರದಲ್ಲಿನ ಏರಿಳಿತದ ಪ್ರಭಾವವೂ ಇದರ ಮೇಲೆ ಬೀರುತ್ತಿದೆ. ಸ್ಥಳೀಯರು ತೋಟಗಳನ್ನು ಮಾರಾಟ ಮಾಡಿ ನಗರಕ್ಕೆ ಹೋಗುತ್ತಿದ್ದರೆ, ಖರೀದಿಸುತ್ತಿರುವವರು ವಾಣಿಜ್ಯ ಉದ್ದೇಶಕ್ಕೆ  ಪರಿವರ್ತಿಸುತ್ತಿದ್ದಾರೆ. ರೆಸಾರ್ಟ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಿದ್ದರು.

ತಾಂತ್ರಿಕ ಸಮಿತಿ ನೀಡುವ ಎನ್‍ಒಸಿಗಳನ್ನು ಆಧರಿಸಿ ಕೃಷಿಯೇತರ ಚಟುವಟಿಕೆಗಳಿಗೆ ಅವಕಾಶ ನೀಡಿದರೆ, ಅದು ನೈಸರ್ಗಿಕ ವಿಕೋಪ ಸೃಷ್ಟಿಗೆ ಕಾರಣವಾಗಲಿದೆ.  ಕಳೆದ ಒಂದೆರಡು ವರ್ಷಗಳಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೂ ಇದು ಕಾರಣವಾಗಿದೆ  ಎಂದು ಮುತ್ತಣ್ಣ ಅರ್ಜಿಯಲ್ಲಿ ನ್ಯಾಯಾಲಯದ ಗಮನ ಸೆಳೆದಿದ್ದರು.

ಅರ್ಜಿಯನ್ನು ವಿಚಾರಣೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, `ತಾಂತ್ರಿಕ ಸಮಿತಿ ನೀಡುವ ನಿರಾಕ್ಷೇಪಣಾ ಪತ್ರವೊಂದನ್ನೇ ಆಧರಿಸಿ ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪರಿವರ್ತಿಸಲು ಆಗುವುದಿಲ್ಲ' ಎಂದು ಅಭಿಪ್ರಾಯಪಟ್ಟಿತಲ್ಲದೆ, ಈ ಸಂಬಂಧ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಹಾಗೂ ತಾಂತ್ರಿಕ ಸಮಿತಿ ಅಧ್ಯಕ್ಷರೂ ಆಗಿರುವ ಕೊಡಗು ಜಿಲಾಧಿಕಾರಿಗಳಿಗೆ ನೋಟೀಸ್ ನೀಡಲು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News