ಕಾಂಗ್ರೆಸ್ ಪ್ರತಿಭಟನೆ ಮಧ್ಯೆ ಸರಕಾರದ ಮುನ್ನೋಟ ಪ್ರಕಟ

Update: 2021-01-28 14:44 GMT

ಬೆಂಗಳೂರು, ಜ. 28: ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ವರ್ಷದ ಮೊದಲ ಅಧಿವೇಶನದಲ್ಲಿ ಭಾಷಣ ಮಾಡಲು ರಾಜಭವನದಿಂದ ಆಗಮಿಸಿದ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಗುರುವಾರ ಕೆಂಪು ಹಾಸಿನ ಅದ್ದೂರಿ ಸ್ವಾಗತ ಕೋರಲಾಯಿತು.

ಗುರುವಾರ ಬೆಳಗ್ಗೆ 10:50ರ ಸುಮಾರಿಗೆ ರಾಜಭವನದಿಂದ ಕಾರಿನಲ್ಲಿ ವಿಧಾನಸೌಧದ ಪೂರ್ವದ್ವಾರಕ್ಕೆ ಬರುತ್ತಿದ್ದಂತೆ ಅಶ್ವಾರೂಢ ಪೊಲೀಸ್ ಸಿಬ್ಬಂದಿ ಮೊದಲಿಗೆ ಬೆಂಗಾವಲಾದರು. ಪೂರ್ವದ್ವಾರದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಪಾಲರಿಗೆ ಪುಷ್ಪಗುಚ್ಚವನ್ನು ನೀಡಿ ಸ್ವಾಗತಿಸಿದರು.

ವಿಧಾನಸೌಧದ ಪೂರ್ವದ್ವಾರದಿಂದ ವಿಧಾನಸೌಧದ ಒಳಗೆ ಪ್ರವೇಶಿಸಿದ ರಾಜ್ಯಪಾಲರು ಅಲ್ಲಿಂದ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕುತ್ತಾ ವಿಧಾನಸಭೆಯ ಸಭಾಂಗಣವನನ್ನು ಪ್ರವೇಶಿಸಿದರು. ರಾಜ್ಯಪಾಲರು ವಿಧಾನಸಭೆ ಒಳ ಬರುವವರೆಗೂ ಪೊಲೀಸ್ ಬ್ಯಾಂಡ್ ಸಂಗೀತದ ಮೂಲಕ ರಾಜ್ಯಪಾಲರಿಗೆ ಸ್ವಾಗತ ಕೋರಿದರು.

ರಾಜ್ಯಪಾಲ ವಜೂಭಾಯಿ ವಾಲಾ ಅವರು ವಿಧಾನಸಭೆ ಸಭಾಂಗಣಕ್ಕೆ ಬಂದು ಸ್ಪೀಕರ್ ಪೀಠದಲ್ಲಿ ನಿಲ್ಲುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಗೀತೆ ಮೊಳಗಿದ ನಂತರ ಸುಮಾರು 11ಗಂಟೆಯ ಸುಮಾರಿಗೆ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ತಮ್ಮ ಭಾಷಣವನ್ನು ಓದಲಾರಂಭಿಸಿದರು.
ವಜೂಭಾಯಿ ವಾಲಾ ಅವರು 26 ಪುಟಗಳ ರಾಜ್ಯಪಾಲರ ಭಾಷಣವನ್ನು ಸುಮಾರು 40 ನಿಮಿಷಗಳ ಕಾಲ ಓದಿದರು. ಆ ಬಳಿಕ ಅವರ ಭಾಷಣದ ನಂತರ ಮತ್ತೆ ರಾಷ್ಟ್ರಗೀತೆಯನ್ನು ಹಾಡಲಾಯಿತು. ಇದಾದ ನಂತರ ರಾಜ್ಯಪಾಲರು ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಎಲ್ಲ ಸದಸ್ಯರಿಗೆ ನಮಸ್ಕರಿಸಿ ತಾವು ಬಂದ ಪೂರ್ವದ್ವಾರದ ಮೂಲಕವೇ ರಾಜಭವನಕ್ಕೆ ಹಿಂದಿರುಗಿದರು.

ಅವರನ್ನು ಪರಿಷತ್ ಸಭಾಪತಿ ಕೆ. ಪ್ರತಾಪ್‍ಚಂದ್ರ ಶೆಟ್ಟಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಂಸದೀಯ ಹಾಗೂ ಗೃಹ ಸಚಿವ ಬಸವರಾಜು ಬೊಮ್ಮಾಯಿ, ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಹಾಗೂ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಬೀಳ್ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News