ಕಲಬುರಗಿ: ಮ್ಯಾನ್ ಹೋಲ್ ಗೆ ಇಳಿದ ಇಬ್ಬರು ಉಸಿರುಗಟ್ಟಿ ಮೃತ್ಯು, ಓರ್ವನ ಸ್ಥಿತಿ ಗಂಭೀರ

Update: 2021-01-28 15:13 GMT

ಕಲಬುರಗಿ: ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದ ಇಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಸ್ಥಿತಿಯಲ್ಲಿರುವ ಘಟನೆ ಕೈಲಾಶ್ ನಗರದಲ್ಲಿ ಇಂದು ನಡೆದಿದೆ.

ಮೃತಪಟ್ಟವರನ್ನು ಲಾಲ್ ಅಹ್ಮದ್ (25), ರಶೀದ್ (30) ಎಂದು ಗುರುತಿಸಲಾಗಿದೆ. ರಾಜು ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 

ಮೊದಲು ಓರ್ವ ಕಾರ್ಮಿಕ 20 ಅಡಿ ಆಳವಿದ್ದ ಮ್ಯಾನ್ ಹೋಲ್ ಒಳಗೆ ಇಳಿದಿದ್ದಾನೆ. ಆತ ಉಸಿರುಗಟ್ಟಿ ಒಳಗೆ ಬಾಕಿಯಾದಾಗ ಆತನನ್ನು ರಕ್ಷಿಸಲು ಮತ್ತೋರ್ವ ಇಳಿದು ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರಿಬ್ಬರನ್ನು ರಕ್ಷಿಸಲು ಹೋದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಜಿಮ್ಸ್ ಆಸ್ಪತ್ರೆ ಎದುರು ರಸ್ತೆ ತಡೆ ನಡೆಸಿ ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈ ಕುರಿತು ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News