ಶುಲ್ಕ ನಿಗದಿ ಕುರಿತು ಸರಕಾರದ ವಿಳಂಬ ಧೋರಣೆ ಖಂಡಿಸಿ ವಿದ್ಯಾರ್ಥಿ ಪೋಷಕರಿಂದ ಜ.31ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆ

Update: 2021-01-28 15:45 GMT

ಬೆಂಗಳೂರು, ಜ.28: ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಾಲಾ ಶುಲ್ಕ ನಿಗದಿ ಪಡಿಸುವಂತೆ ಪೋಷಕರು ಹಲವು ದಿನಗಳಿಂದ ಒತ್ತಾಯಿಸಿದ್ದರೂ ರಾಜ್ಯ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜ.31ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪೋಷಕರ ಸಂಘಟನೆಯ ಅಧ್ಯಕ್ಷ ಯೋಗಾನಂದ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಜ.15ರಂದು ಶಿಕ್ಷಣ ಆಯುಕ್ತ ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೋಷಕರ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಸಲ್ಲಿಸಿ, ಹಾಗೂ ರಾಜ್ಯ ಸರಕಾರ ಎಲ್ಲವನ್ನು ಪರಿಶೀಲಿಸಿ ಶೀಘ್ರವೇ ಶಾಲಾ ಶುಲ್ಕ ನಿಗಧಿ ಪಡಿಸಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ರಾಜ್ಯ ಸರಕಾರ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ.

ಕೋವಿಡ್‍ನಿಂದಾಗಿ ಬಹುತೇಕ ಪೋಷಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮನೆಯ ಅಗತ್ಯಗಳನ್ನು ಪೂರೈಸುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಖಾಸಗಿ ಶಾಲೆಗಳು ಪೋಷಕರಿಂದ ಶಾಲಾ ಶುಲ್ಕದ ಹೆಸರಿನಲ್ಲಿ ಪೋಷಕರನ್ನು ಮತ್ತಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಲಾಕ್‍ಡೌನ್‍ನಿಂದಾಗಿ ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ನಡೆದಿಲ್ಲ. ಆನ್‍ಲೈನ್ ಕ್ಲಾಸ್‍ಗಳು ಸಮರ್ಪಕವಾಗಿ ನಡೆದಿಲ್ಲ. ಆದರೂ ಪೂರ್ಣ ಪ್ರಮಾಣದ ಶಾಲಾ ಶುಲ್ಕವನ್ನು ಕಟ್ಟುವಂತೆ ಪೋಷಕರನ್ನು ಒತ್ತಾಯಿಸಲಾಗುತ್ತಿದೆ. ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನು ತರಗತಿಗಳಿಂದ ಹಾಗೂ ಆನ್‍ಲೈನ್ ನೋಂದಣಿಯಿಂದ ಹೊರಕಳಿಸುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಒಂದು ತೀರ್ಮಾನ ಕೈಗೊಳ್ಳದ ಹೊರತು, ಈ ಸಮಸ್ಯೆ ಬಗೆ ಹರಿಯುವುದಿಲ್ಲ. ಈ ವಿಷಯದಲ್ಲಿ ಸರಕಾರ ವಿಳಂಬ ಧೋರಣೆ ಅನುಸರಿಸಿದಷ್ಟು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಅನಗತ್ಯವಾದ ದೋಷಾರೋಪಣೆಗಳು ಹೆಚ್ಚಾಗುತ್ತಿರುತ್ತವೆ. ಹೀಗಾಗಿ ಜ.31ರಂದು ರಾಜ್ಯ ಸರಕಾರದ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶಾಲಾ ಶುಲ್ಕ ನಿಗದಿಗೆ ಪ್ರತ್ಯೇಕ ಸಲಹಾ ಸಮಿತಿಯನ್ನು ರಚಿಸಬೇಕಿದೆ. ಈ ಕುರಿತಂತೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು. ಆದರೆ, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಶಾಲಾ ಶುಲ್ಕ ಕಟ್ಟದ ಕಾರಣಕ್ಕೆ ತರಗತಿಯಿಂದ ಹೊರಗುಳಿಸುವಂತಿಲ್ಲ. ಈ ಬಗ್ಗೆ ದೂರುಗಳು ಬಂದರೆ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸುರೇಶ್‍ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News