ಶುಕ್ರವಾರ ಉಪಸಭಾಪತಿ ಚುನಾವಣೆ: ಕೆ.ಸಿ.ಕೊಂಡಯ್ಯ-ಪ್ರಾಣೇಶ್ ಮಧ್ಯೆ ಪೈಪೋಟಿ

Update: 2021-01-28 15:54 GMT

ಬೆಂಗಳೂರು, ಜ.28: ವಿಧಾನಪರಿಷತ್‍ನ ಉಪಸಭಾಪತಿ ಸ್ಥಾನಕ್ಕೆ ನಾಳೆ(ಜ.29) ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್ ಮತ್ತು ಕಾಂಗ್ರೆಸ್‍ನಿಂದ ಕೆ.ಸಿ.ಕೊಂಡಯ್ಯ ಜ.28ರಂದು ತಮ್ಮ ನಾಮಪತ್ರ ಸಲ್ಲಿಸಿದರು. 

ಬಿಜೆಪಿ ಮತ್ತು ಜೆಡಿಎಸ್ ನಡುವೆ ನಡೆದಿರುವ ಒಪ್ಪಂದದಂತೆ ಉಪಸಭಾಪತಿ ಸ್ಥಾನವನ್ನು ಬಿಜೆಪಿಗೂ, ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೂ ಬಿಟ್ಟು ಕೊಡಲು ಒಡಂಬಡಿಕೆಯಾಗಿದೆ. 

ಕಾಂಗ್ರೆಸ್‍ಗೆ ಉಪಸಭಾಪತಿ ಚುನಾವಣೆಯಲ್ಲಿ ಗೆಲ್ಲುವಷ್ಟು ಸಂಖ್ಯಾಬಲವಿಲ್ಲದಿದ್ದರೂ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ, ಒಳಒಪ್ಪಂದವನ್ನು ಜಗಜ್ಜಾಹೀರು ಮಾಡಲು ಕಾಂಗ್ರೆಸ್ ಕೆ.ಸಿ. ಕೊಂಡಯ್ಯ ಅವರನ್ನು ಕಣಕ್ಕಿಳಿಸಿದೆ ಎನ್ನಲಾಗಿದೆ. 

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಇದನ್ನು ಜನತೆಗೆ ತಿಳಿಸಲೆಂದೇ ನಾವು ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಉಪಸಭಾಪತಿ ಸ್ಥಾನಕ್ಕೆ 

ಅಭ್ಯರ್ಥಿಯನ್ನಾಗಿ ಕೆ.ಸಿ.ಕೊಂಡಯ್ಯ ಅವರನ್ನು ನಿಲ್ಲಿಸಿದ್ದೇವೆ. ಮುಂದೆ ಸಭಾಪತಿ ಚುನಾವಣಾ ಸಂದರ್ಭದಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು. 

ವಿಧಾನಪರಿಷತ್‍ನ ಉಪಸಭಾಪತಿ ಸ್ಥಾನಕ್ಕೆ ನಾಳೆ(ಜ.29) ಚುನಾವಣೆ ನಡೆಯಲಿದ್ದು, ಜೆಡಿಎಸ್ ಬೆಂಬಲ ಇರುವುದರಿಂದ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 

ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಬಹುತೇಕ ಖಚಿತ
ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ವಿರುದ್ಧ ಬಿಜೆಪಿ-ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿರುವುದರಿಂದ ಮುಂದಿನ ಸಭಾಪತಿ ಹುದ್ದೆಗೆ ಜೆಡಿಎಸ್ ಹಿರಿಯ ಮುಖಂಡರು ಆಗಿರುವ ಬಸವರಾಜ ಹೊರಟ್ಟಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News