ಚಿಕ್ಕಮಗಳೂರು: ನಗರಸಭೆ ವಾರ್ಡ್‍ಗಳ ಮೀಸಲಾತಿ ಕರಡಿನಲ್ಲಿ ಲೋಪದೋಷ; ಆರೋಪ
ಚಿಕ್ಕಮಗಳೂರು, ಜ.28: ಇಲ್ಲಿನ ನಗರಸಭೆಗೆ ಚುನಾವಣೆ ನಡೆದು 8 ವರ್ಷ ಕಳೆದಿದ್ದು, ಮತ್ತೆ ಚುನಾವಣೆ ನಡೆಸಲು ಸರಕಾರ ಮೀಸಲು ನಿಗದಿ ಮೀಸಲಾತಿಯ ಕರಡನ್ನು ಪ್ರಕಟಿಸಿದೆ. ಆದರೆ ಈ ಮೀಸಲಾತಿ ಕರಡಿನಲ್ಲಿ ಲೋಪ ದೋಷಗಳಿದ್ದು, ಹಲವು ಅವಧಿಗೆ ಮಹಿಳಾ ಮೀಸಲಾತಿ ನೀಡದ ವಾರ್ಡ್‍ಗಳಿಗೆ ಈ ಬಾರಿಯೂ ಮಹಿಳಾ ಮೀಸಲಾತಿ ನೀಡಿಲ್ಲ. ಈ ದೋಷವನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಸರ್ವಧರ್ಮ ಗೆಳೆಯ ಬಳಗ ಟ್ರಸ್ಟ್ ನ ಇಬ್ರಾಹೀಂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಚಿಕ್ಕಮಗಳೂರು ನಗರಸಭೆಗೆ 2013ರಲ್ಲಿ ಚುನಾವಣೆ ನಡೆದಿದ್ದು, ಐದು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ಸರಕಾರ ಮೀಸಲಾತಿಯನ್ನು ಪ್ರಕಟಿಸಿತ್ತು. ಆದರೆ ಆಡಳಿತ ಪಕ್ಷವಾದ ಬಿಜೆಪಿಯ ಸ್ಥಳೀಯ ಮುಖಂಡರು ತಮ್ಮ ವಾರ್ಡ್‍ಗಳ ಮೀಸಲು ಬದಲಾದ ಹಿನ್ನೆಲೆಯಲ್ಲಿ ಸ್ಥಾನ ಕೈತಪ್ಪುವ ಭಯದಿಂದ ಹಾಗೂ ರಾಜಕೀಯ ಲಾಭಕ್ಕಾಗಿ ನ್ಯಾಯಾಲಯದಲ್ಲಿ ಈ ಮೀಸಲಾತಿಯನ್ನು ಪ್ರಶ್ನಿಸಿದ್ದರು. ಈ ಕಾರಣದಿಂದಾಗಿ ನಗರಸಭೆ ಚುನಾವಣೆ ಮೂರು ವರ್ಷಗಳ ಕಾಲ ಮುಂದಕ್ಕೆ ಹೋಗಿತ್ತು.
ನ್ಯಾಯಾಲಯ ಈ ಮೀಸಲು ಸಂಬಂಧ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಮೀಸಲಾತಿ ಗೊಂದಲ ಬಗೆಹರಿದಿತ್ತು. ಆದ್ದರಿಂದ ಸರಕಾರ ಇತ್ತೀಚೆಗೆ ಹೊಸ ಮೀಸಲಾತಿಯ ಕರಡನ್ನು ಪ್ರಕಟಿಸಿದ್ದು, ಈ ಮೀಸಲಾತಿ ಕರಡು ಲೋಪಗಳಿಂದ ಕೂಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರಕಾರ ಇತ್ತೀಚೆಗೆ ಹೊರಡಿಸಿರುವ ಮೀಸಲಾತಿಯಿಂದ ಪ್ರತಿಭಾವಂತ ಯುವಕ-ಯುವತಿಯರಿಗೆ ಅವಕಾಶ ಕೈತಪ್ಪಿದ್ದು, ನಗರಸಭೆಯ ವಿವಿಧ ವಾರ್ಡ್‍ಗಳ ಪೈಕಿ ಕೆಲ ವಾರ್ಡ್‍ಗಳಿಗೆ ಮಹಿಳಾ ಮೀಸಲಾತಿಯನ್ನು ಕಲ್ಪಿಸುವಲ್ಲಿ ಸರಕಾರ ವಿಫಲವಾಗಿದ್ದು, ಇದರಿಂದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಮಹಿಳೆಯರುವ, ಯುವತಿಯರಿಗೆ ಅವಕಾಶ ಕೈತಪ್ಪಿದಂತಾಗಿದೆ. ಸರಕಾರ ಪ್ರಕಟಿಸಿರುವ ಮೀಸಲು ಕರಡು ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿ ಪಕ್ಷದ ಮುಖಂಡರು ಸರಕಾರದ ಮೇಲೆ ಒತ್ತಡ ಹೇರಿರುವುದರಿಂದ ತಮಗೆ ಬೇಕಾದ ಮೀಸಲಾತಿಯನ್ನು ಸರಕಾರ ಪ್ರಕಟಿಸಿರುವುದು ಸ್ಪಷ್ಟವಾಗುತ್ತಿದೆ. ಒಂದು ಪಕ್ಷದವರು ಚುನಾವಣೆಯಲ್ಲಿ ಬಹುಮತ ಪಡೆಯುವ ಉದ್ದೇಶದಿಂದ ಈ ಮೀಸಲಾತಿ ಕರಡನ್ನು ಪ್ರಕಟಿಸಲಾಗಿದೆ. ಆದ್ದರಿಂದ ಲೋಪದೋಷಗಳಿರುವ ಈ ಕರಡನ್ನು ಪರಿಷ್ಕರಿಸಿ ಹೊಸ ಮೀಸಲು ಕರಡನ್ನು ಪ್ರಕಟಿಸಬೇಕೆಂದು ಇಬ್ರಾಹೀಂ ಮನವಿಯಲ್ಲಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ರಾಜ್ಯ ಚುನಾವಣೆ ಆಯೋಗಕ್ಕೂ ಪತ್ರ ಬರೆಯಲು ಹಾಗೂ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗುವುದಾಗಿ ಇಬ್ರಾಹೀಂ ಮನವಿಯಲ್ಲಿ ತಿಳಿಸಿದ್ದಾರೆ.