ಇರಾನ್ ಜೊತೆಗಿನ ಪರಮಾಣು ಒಪ್ಪಂದಕ್ಕೆ ಮರಳುವ ದಾರಿ ದೂರ

Update: 2021-01-28 18:34 GMT

ವಾಶಿಂಗ್ಟನ್, ಜ. 28: ಇರಾನ್ ತನ್ನ ಬದ್ಧತೆಗಳನ್ನು ಪೂರೈಸಿದ ಬಳಿಕವಷ್ಟೇ ಅಮೆರಿಕವು ಅದರ ಜೊತೆಗಿನ ಪರಮಾಣು ಒಪ್ಪಂದಕ್ಕೆ ಮರಳುವುದು ಎಂದು ಅಮೆರಿಕದ ನೂತನ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಬುಧವಾರ ಹೇಳಿದ್ದಾರೆ.

ವಿದೇಶ ಕಾರ್ಯದರ್ಶಿಯಾಗಿ ತನ್ನ ಮೊದಲ ಪೂರ್ಣ ದಿನದಂದು ಮಾತನಾಡಿದ ಬ್ಲಿಂಕನ್, ಇರಾನ್ ಜೊತೆಗಿನ ಪರಮಾಣು ಒಪ್ಪಂದಕ್ಕೆ ಮರಳುವ ಅಧ್ಯಕ್ಷ ಜೋ ಬೈಡನ್‌ರ ಇಚ್ಛೆಯನ್ನು ಖಚಿತಪಡಿಸಿದರು. ಆದರೆ, ಈ ವಿಷಯದಲ್ಲಿ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದಾಗಿ ಇರಾನ್ ಹಾಕುತ್ತಿರುವ ಒತ್ತಡವನ್ನು ಅವರು ತಿರಸ್ಕರಿಸಿದರು.

ಇರಾನ್ ಜೊತೆಗಿನ ಪರಮಾಣು ಒಪ್ಪಂದವು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪೂರ್ವಾಧಿಕಾರಿ ಬರಾಕ್ ಒಬಾಮರ ಅವಧಿಯಲ್ಲಿ ಜಾರಿಗೆ ಬಂದಿತ್ತು. ಒಪ್ಪಂದಕ್ಕೆ ಅಮೆರಿಕದ ಜೊತೆಗೆ ಜರ್ಮನಿ, ಫ್ರಾನ್ಸ್, ಬ್ರಿಟನ್, ಚೀನಾ ಮತ್ತು ರಶ್ಯಗಳೂ ಸಹಿ ಹಾಕಿದ್ದವು. ಆದರೆ, ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅವರು ಅಮೆರಿಕವನ್ನು ಈ ಒಪ್ಪಂದದಿಂದ ಹೊರತಂದರು.

‘‘ಒಪ್ಪಂದದ ಹಲವು ಅಂಶಗಳನ್ನು ಇರಾನ್ ಪಾಲಿಸುತ್ತಿಲ್ಲ. ಈ ಸಂಬಂಧ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಸ್ವಲ್ಪ ಸಮಯ ತಗಲುವುದು. ಮೊದಲು ಇರಾನ್ ಒಪ್ಪಂದದ ವ್ಯಾಪ್ತಿಗೆ ಮರಳಬೇಕು ಹಾಗೂ ಬಳಿಕ, ಅದು ತನ್ನ ಬದ್ಧತೆಗಳನ್ನು ಪೂರೈಸಿದೆಯೇ ಎನ್ನುವುದನ್ನು ಪರಿಶೀಲಿಸಲು ನಮಗೆ ಸಮಯಾವಕಾಶ ಬೇಕು’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News