ಅಡಿಕೆಗೆ ಡ್ರಗ್ಸ್ ಪಟ್ಟ ನೀಡಿದ ಸರಕಾರದ ವೆಬ್‌ಸೈಟ್

Update: 2021-01-29 05:43 GMT

ಶಿವಮೊಗ್ಗ, ಜ.28: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ. ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿ ವಿವಾದ ಮೈಮೇಲೆ ಎಳೆದುಕೊಂಡ ಬೆನ್ನಲ್ಲೇ ರಾಜ್ಯ ಸರಕಾರ ತನ್ನ ವೆಬ್‌ಸೈಟ್‌ನಲ್ಲಿ ಅಡಿಕೆಗೆ ಡ್ರಗ್ಸ್ ಪಟ್ಟ ನೀಡಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕ ಮತ್ತಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ಸರಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದಾರೆ.

‘ಕರ್ನಾಟಕ ರಾಜ್ಯ ಕೃಷಿ ಮತ್ತು ಮಾರಾಟ ಮಂಡಳಿ’ಯ ವೆ್ಸೈಟ್‌ನಲ್ಲಿ ಅಡಿಕೆಗೆ ಡ್ರಗ್ಸ್ ಪಟ್ಟ ನೀಡಲಾಗಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆ, ಕೃಷಿ ಸಂಬಂಧಿತ ನಿಯಮಗಳು ಸೇರಿದಂತೆ ಕೃಷಿ ಕುರಿತು ಹಲವು ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತದೆ. ಇದೆ ವೆಬ್‌ಸೈಟ್‌ನ ‘ಔಷದ ಮತ್ತು ಮಾದಕ ಉತ್ತೇಜಕ’ ಕಾಲಂನಲ್ಲಿ ಅಡಿಕೆಯನ್ನು ಸೇರಿಸಿ ಗೊಂದಲ ಸೃಷ್ಟಿಸಿದೆ.

ಭಾರತೀಯ ಸಂಸ್ಕೃತಿಯಲ್ಲಿ ಅಡಿಕೆಗೆ ಪವಿತ್ರ ಸ್ಥಾನವಿದೆ. ಯಾವುದೇ ಶುಭ ಕಾರ್ಯವಿದ್ದರೂ ಅಡಿಕೆ, ವೀಳ್ಯದ ಎಲೆ ನೀಡುವುದು ಭಾರತೀಯ ಸಂಪ್ರದಾಯ. ಆದರೆ ಇದೀಗ ಅಡಿಕೆಯ ಮಾನ ಕಳೆಯುವಂತಹ ವಿದ್ಯಾಮಾನಗಳು ಆಗಾಗ ನಡೆಯುತ್ತಲೇ ಇವೆ. 2017 ಮತ್ತು 2019ರಲ್ಲಿ ಸಂಸತ್ ಅಧಿವೇಶನದಲ್ಲಿ ಆರೋಗ್ಯ ಸಚಿವರು ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್ ಬರುತ್ತದೆ ಎಂದು ಹೇಳಿಕೆ ನೀಡಿ ಅಡಿಕೆ ಮಾನವನ್ನು ಹರಾಜು ಹಾಕಿದ್ದರು. ಇದುವರೆಗೆ ಅಡಿಕೆ ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಅಫಿದವಿತ್ ಸಲ್ಲಿಸಲಾಗಿತ್ತು. ಆದರೆ, ಇದೀಗ ರಾಜ್ಯ ಸರಕಾರ ವೆಬ್‌ಸೈಟ್‌ನಲ್ಲಿಯೇ ಅಡಿಕೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸುವ ಮೂಲಕ ಅಡಿಕೆಯ ಮಾನ ಕಳೆಯುವ ಕೆಲಸ ಮಾಡಲಾಗಿದೆ ಎಂದು ಅಡಿಕೆ ಬೆಳೆಗಾರರು ದೂರಿದ್ದಾರೆ.

ರಾಜ್ಯ ಸರಕಾರ ಅಡಿಕೆ ಬೆಳೆಗಾರರ ಹಿತಕಾಪಾಡಲು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಅಡಿಕೆ ಕಾರ್ಯಪಡೆ ರಚನೆ ಮಾಡಿದೆ. ಅಡಿಕೆ ಕುರಿತು ಸಂಶೋಧನೆ ನಡೆಸಲು ಅನುದಾನವನ್ನು ನೀಡಿದೆ. ಆದರೆ, ಈ ನಡುವೆ ರಾಜ್ಯ ಸರಕಾರದ ವೆಬ್‌ಸೈಟ್‌ನಲ್ಲೇ ಅಡಿಕೆ ಮಾನ ಕಳೆದಿರುವುದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಅಡಿಕೆಗೆ ‘ಕೆ’ ಕೆಟಗರಿ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ,ಅಡಿಕೆಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವಿವಾದದ ನಡುವೆ ಅಡಿಕೆಗೆ ಉತ್ತಮ ಧಾರಣೆ ಸಿಗುತ್ತಿದೆ. ಈ ಹೊತ್ತಿನಲ್ಲಿ ಅಡಿಕೆಯನ್ನು ಔಷಧ ಮತ್ತು ಮಾದಕ ಉತ್ತೇಜಕ ‘ಕೆ’ ಕೆಟಗರಿ ಅಡಿ ಸೇರಿಸಿದೆ. ವಿಪರ್ಯಾಸವೆಂದರೆ ವೀಳ್ಯೆದೆಲೆಯನ್ನು ಈ ಕೆಟಗಿರಿಯಲ್ಲಿ ಸೇರಿಸಲಾಗಿದೆ.

ಅಡಿಕೆ ಬೆಳೆಗಾರರ ಆಕ್ರೋಶ: ಔಷಧ ಮತ್ತು ಮಾದಕ ವಸ್ತುಗಳ ಕೆಟಗಿರಿಯಲ್ಲಿ ಅಡಿಕೆ, ವೀಳ್ಯೆದೆಲೆ ಮತ್ತು ತಂಬಾಕು ಇದೆ. ಈ ಪೈಕಿ ವೀಳ್ಯೆದೆಲೆ ಮತ್ತು ಅಡಿಕೆಗೆ ಔಷಧೀಯ ಗುಣಲಕ್ಷಣವಿದೆ. ನಾಟಿ ಮತ್ತು ಆರ್ಯುವೇದ ಪದ್ಧತಿಯಲ್ಲಿ ಇವೆರೆಡನ್ನು ಬಳಸಲಾಗುತ್ತದೆ. ಆದರೆ, ಇವೆರಡನ್ನು ಮಾದಕ ವಸ್ತು ಕೆಟಗಿರಿಯಲ್ಲಿ ಸೇರ್ಪಡೆ ಮಾಡಿರುವುದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ತಂಬಾಕು ಲಾಭಿಯಿಂದಾಗಿ ಅಡಿಕೆ ಬೆಲೆ ನಿರಂತರವಾಗಿ ಕುಸಿಯಲಾರಂಭಿಸಿತ್ತು. ಈ ವೇಳೆ ಅಡಿಕೆ ಕ್ಯಾನ್ಸರ್ ಕಾರಕ ಎಂದಾಕ್ಷಣ 80 ಸಾವಿರಕ್ಕೇರಿದ ಅಡಿಕೆ ಧಾರಣೆ ಇದೀಗ 40 ಸಾವಿರಕ್ಕಿಳಿದಿದೆ. ಇದೀಗ ಅಡಿಕೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಅಡಿಕೆ ನಿಷೇಧಿಸಲು ಹಂತಹಂತವಾಗಿ ಅಡಿಕೆಯ ಮೌಲ್ಯವನ್ನೇ ಕಳೆಯಲಾಗುತ್ತಿದೆಯೇ ಎಂಬ ಅನುಮಾನ ಇದೀಗ ಅಡಿಕೆ ಬೆಳೆಗಾರರನ್ನು ಕಾಡಲಾರಂಭಿಸಿದೆ.

ಯಾವ ಆಧಾರದ ಮೇಲೆ ಮಾದಕ ವಸ್ತು ಪಟ್ಟಿಗೆ ಸೇರಿಸಿದ್ದೀರಿ?

ಅಡಿಕೆಯನ್ನು ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಂದು ಜವಾಬ್ದಾರಿಯುತ ಇಲಾಖೆ ತನ್ನ ವೆಬ್‌ಸೈಟ್ ರೂಪಿಸುವಾಗ ಪ್ರತಿಯೊಂದು ಚಿಕ್ಕಚಿಕ್ಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇದು ಎಲ್ಲ ಬೆಳೆಗಳ ಧಾರಣೆಯನ್ನು ಕೊಡುತ್ತದೆ. ರಾಜ್ಯಾದ್ಯಂತ ರೈತರು ಈ ವೆಬ್‌ಸೈಟ್ ಮೇಲೆ ಅವಲಂಬಿತರಾಗಿದ್ದಾರೆ. ಇತಂಹ ಸಂದರ್ಭದಲ್ಲಿ ಅಡಿಕೆಯನ್ನು ಯಾವ ಆಧಾರದ ಮೇಲೆ ಮಾದಕ ವಸ್ತು ಪಟ್ಟಿಗೆ ಸೇರಿಸಿದ್ದಾರೆ?. ಯಾಕೆ ಕೆಟಗರಿ ಸೃಷ್ಟಿ ಮಾಡಿದ್ದಾರೆ ಎಂದು ಇಲಾಖೆ ಉತ್ತರಿಸಬೇಕು.

ಗೋಪಾಲ್ ಯಡಗೆರೆ, ಅಡಿಕೆ ಬೆಳೆಗಾರ

ಅಡಿಕೆ ನಿಷೇಧ ಮಾಡುವ ಮುನ್ನುಡಿ

ಅಡಿಕೆಯನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರಿಸಿರುವುದನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಖಂಡಿಸುತ್ತದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಕ್ಕೆ ಅಡಿಕೆ ಕೇವಲ ಚುನಾವಣಾ ವಸ್ತುವಾಗಿದೆ.ಲಕ್ಷಾಂತರ ಜನರ ಬದುಕಿನ ಬೆಳೆಯಾಗಿದೆ ಎಂಬುವುದನ್ನು ತಿಳಿಯುವಲ್ಲಿ ವಿಫಲರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಅಡಿಕೆಯ ಗೌರವ ಕಾಪಾಡುವುದಾಗಿ ಹೇಳಿದ್ದರು. 2020 ಬಜೆಟ್‌ನಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಅಡಿಕೆ ಬೆಳೆಯನ್ನು ಬಿಟ್ಟಿದ್ದಾರೆ.

ಬಿ.ಎ ರಮೇಶ್ ಹೆಗಡೆ, ಅಧ್ಯಕ್ಷ, ಜಿಲ್ಲಾ ಅಡಿಕೆ ಬೆಳೆಗಾರರ ಸಂಘ

Writer - ಶರತ್ ಪುರದಾಳು

contributor

Editor - ಶರತ್ ಪುರದಾಳು

contributor

Similar News