ಪರಿಷತ್ ಉಪಸಭಾಪತಿಯಾಗಿ ಬಿಜೆಪಿ ಸದಸ್ಯ ಎಂ.ಕೆ ಪ್ರಾಣೇಶ್ ಆಯ್ಕೆ

Update: 2021-01-29 12:35 GMT

ಬೆಂಗಳೂರು, ಜ.29: ವಿಧಾನ ಪರಿಷತ್ ಉಪ ಸಭಾಪತಿಯಾಗಿ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಬಹುಮತದಿಂದ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಶುಕ್ರವಾರ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‍ನ ಸದಸ್ಯರು ಎಂ.ಕೆ.ಪ್ರಾಣೇಶ್ ಪರವಾಗಿ 41 ಮತಗಳನ್ನು ಚಲಾಯಿಸಿದರು. ಕಾಂಗ್ರೆಸ್‍ನ 24 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಎಂ.ಕೆ.ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು. 

ಉಪಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳೂ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದವು. ಕಾಂಗ್ರೆಸ್‍ನ 28 ಸದಸ್ಯರ ಪೈಕಿ ನಾಲ್ಕು ಮಂದಿ ಗೈರು ಹಾಜರಾಗಿದ್ದರು.

ಈ ಹಿಂದೆ ಉಪಸಭಾಪತಿಯಾಗಿದ್ದ ಜೆಡಿಎಸ್‍ನ ಧರ್ಮೇಗೌಡ ಅವರ ಅಕಾಲಿಕ ನಿಧನದಿಂದಾಗಿ ತೆರವಾದ ಹುದ್ದೆಗೆ ಚುನಾವಣೆ ನಡೆಯಿತು. ಎಂ.ಕೆ.ಪ್ರಾಣೇಶ್ ಅವರ ಹೆಸರನ್ನು ಬಿಜೆಪಿ ಸದಸ್ಯರಾದ ಶಶಿಲ್ ಜಿ. ನಮೋಶಿ ಮತ್ತು ಕವಟಗಿಮಠ ಮಹಾಂತೇಶ್ ಪ್ರಸ್ತಾಪಿಸಿದರು. ಬಿಜೆಪಿಯ ತೇಜಶ್ವಿನಿಗೌಡ ಸೇರಿದಂತೆ ಇತರೆ ಇಬ್ಬರು ಸದಸ್ಯರು ಅನುಮೋದಿಸಿದರು.

ಕಾಂಗ್ರೆಸ್‍ನ ಕೆ.ಸಿ.ಕೊಂಡಯ್ಯ ಅವರ ಹೆಸರನ್ನು ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮತ್ತು ಅಲ್ಲಂ ವೀರಭದ್ರಪ್ಪ ಅವರು ಪ್ರಸ್ತಾಪಿಸಿದರೆ, ವಿರೋಧ ಪಕ್ಷಗಳ ಸಚೇತಕ ನಾರಾಯಣಸ್ವಾಮಿ ಮತ್ತು ಬಿ.ಕೆ.ಹರಿಪ್ರಸಾದ್ ಅನುಮೋದಿಸಿದರು. ಈ ಹಂತದಲ್ಲಿ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಪ್ರಸ್ತಾವನೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲು ಮುಂದಾದಾಗ ಜೆಡಿಎಸ್‍ನ ಶ್ರೀಕಂಠೇಗೌಡ ಅವರು ಅರ್ಧಗಂಟೆ ಕಾಲಾವಕಾಶ ಕೊಡಿ, ಯಾರಾದರೂ ನಾಮಪತ್ರ ಹಿಂಪಡೆಯುವುದಿದ್ದರೆ ವಾಪಸ್ ಪಡೆದು ಅವಿರೋಧವಾಗಿ ಆಯ್ಕೆಯಾಗುವ ಉತ್ತಮ ಸಂಪ್ರದಾಯ ಮುಂದುವರಿಯಲಿ ಎಂದರು.

ಈಗಾಗಲೇ ನಾಮಪತ್ರಗಳು ಅಂಗೀಕಾರವಾಗಿರುವುದರಿಂದ ಅವುಗಳನ್ನು ಹಿಂಪಡೆಯಲು ಬರುವುದಿಲ್ಲ. ಪ್ರಸ್ತಾವನೆ ಮಂಡನೆಯಾಗಿದೆ, ಚುನಾವಣೆ ನಡೆಯುವುದು ಅನಿವಾರ್ಯ ಎಂದು ಬಿಜೆಪಿಯ ಪುಟ್ಟಣ್ಣ ಹೇಳಿದರು. ಧ್ವನಿಮತದ ಮೂಲಕವೇ ಪ್ರಸ್ತಾವನೆ ಅಂಗೀಕರಿಸಲು ಸಭಾಪತಿಯವರು ಮುಂದಾದಾಗ ಕಾಂಗ್ರೆಸ್‍ನ ಪಿ.ಆರ್.ರಮೇಶ್ ಮತ್ತು ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣೆ ಪ್ರಕ್ರಿಯೆ ಎಂದ ಮೇಲೆ ಮತಕ್ಕೆ ಹಾಕಬೇಕು, ಧ್ವನಿಮತದ ಅಂಗೀಕಾರ ಬೇಡ ಎಂದು ಸಲಹೆ ನೀಡಿದರು.

ಪ್ರಸ್ತಾವನೆ ಅಂಗೀಕಾರಗೊಂಡು ಫಲಿತಾಂಶ ಘೋಷಣೆಯಾಗಿಲ್ಲ, ಈಗ ನೀವು ವಿಭಜಕ ಮತಗಳನ್ನು ಕೇಳುತ್ತಿರುವುದರಿಂದ ಮತಕ್ಕೆ ಹಾಕುತ್ತೇನೆ ಎಂದು ಸಭಾಪತಿಯವರು ಹೇಳಿ, ಮತ ಚಲಾಯಿಸಲು ಬಲಭಾಗದ ಸದಸ್ಯರಿಗೆ ಸೂಚನೆ ನೀಡಿದರು. ಬಲಭಾಗದ ಆಡಳಿತ ಪಕ್ಷದ ನಾಲ್ಕು ಸಾಲಿನ ಎಲ್ಲ ಸದಸ್ಯರು ಪ್ರಾಣೇಶ್ ಪರವಾಗಿ ಮತ ಚಲಾಯಿಸಿದರು. ಎಡ ಭಾಗದ ಸದಸ್ಯರಿಗೆ ಮತ ಚಲಾಯಿಸಲು ಸಭಾಪತಿಯವರು ಸೂಚಿಸಿದಾಗ ಜೆಡಿಎಸ್‍ನ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಅವರು ಎದ್ದು ನಿಂತರು. ಅದೇ ಸಾಲಿನಲ್ಲಿದ್ದ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‍ನ ಸದಸ್ಯ ಕೆ.ಸಿ.ಕೊಂಡಯ್ಯ ಕೂಡ ಎದ್ದು ನಿಂತರು. ತಕ್ಷಣವೇ ಅವರ ಪಕ್ಕದಲ್ಲಿದ್ದ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಅವರನ್ನು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು.

ಜೆಡಿಎಸ್‍ನ ಸದಸ್ಯರು ಪ್ರಾಣೇಶ್ ಪರವಾಗಿ ಮತ ಹಾಕಿದರೆ, ಕಾಂಗ್ರೆಸ್‍ನ 24 ಮಂದಿ ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಅಂತಿಮ ಫಲಿತಾಂಶವನ್ನು ಪ್ರಕಟಿಸಿದ ಸಭಾಪತಿಯವರು 41 ಮತಗಳನ್ನು ಪಡೆದಿರುವ ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಬಿಜೆಪಿಯ ಸದಸ್ಯರು ಅವರನ್ನು ಅಭಿನಂದಿಸಿದರು.

ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸರಕಾರದ ಸಚೇತಕ ಮಹಂತೇಶ್ ಕವಟಗಿ ಮಠ್ ಅವರು ನೂತನ ಉಪ ಸಭಾಪತಿಯವರನ್ನು ಕರೆತಂದು ಆಸನದಲ್ಲಿ ಕೂರಿಸಿದರು. ಬಳಿಕ ಪಕ್ಷಾತೀತವಾಗಿ ಎಲ್ಲ ಸದಸ್ಯರು ನೂತನ ಉಪ ಸಭಾಪತಿಯವರನ್ನು ಅಭಿನಂದಿಸಿ ಗುಣಗಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News