ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಸಚಿವ ಸುರೇಶ್ ಕುಮಾರ್

Update: 2021-01-29 14:06 GMT

ಬೆಂಗಳೂರು, ಜ.29: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಪಿಯು ಪರೀಕ್ಷೆಗಳು ಮೇ 24ರಿಂದ ಜೂ.10ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಸೋಂಕಿನ ಪ್ರಕರಣದ ಹಿನ್ನೆಲೆಯಲ್ಲಿ 2020-21ನೇ ವರ್ಷದ ದ್ವಿತೀಯ ಪಿಯು ತರಗತಿಗಳು ಪ್ರಸಕ್ತ ಸಾಲಿನ ಜ.1ರಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಲಾ ಶೈಕ್ಷಣಿಕ ವರ್ಷದಲ್ಲಿ ದೊರೆತ ಅವಧಿಗೆ ಅನುಗುಣವಾಗಿ ಪಿಯು ಪರೀಕ್ಷೆಗಳಿಗೆ ಪರೀಕ್ಷಾಭಿಮುಖವಾಗಿ ಈಗಾಗಲೇ ಪಠ್ಯಾಂಶ ನಿಗದಿಯಾಗಿದೆ ಎಂದು ತಿಳಿಸಿದರು.

ನೀಟ್, ಜೆಇಇಗಳಂತಹ ಮುಂದಿನ ತರಗತಿಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಮೇ 24ರಂದು ಭೌತಶಾಸ್ತ್ರ/ ಇತಿಹಾಸ

ಮೇ 25ರಂದು ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್

ಮೇ 26ರಂದು ಭೂಗರ್ಭಶಾಸ್ತ್ರ/ ಗೃಹ ವಿಜ್ಞಾನ/ ಬೇಸಿಕ್ ಮ್ಯಾತ್ಸ್ /ತರ್ಕಶಾಸ್ತ್ರ

ಮೇ 27ರಂದು ಗಣಿತ/ಅಕೌಂಟೆನ್ಸಿ/ಐಚ್ಛಿಕ ಕನ್ನಡ

ಮೇ 28ರಂದು ಉರ್ದು/ ಸಂಸ್ಕೃತ

ಮೇ 29ರಂದು ರಾಜ್ಯಶಾಸ್ತ್ರ

ಮೇ 31ರಂದು ರಸಾಯನಶಾಸ್ತ್ರ/ವ್ಯವಹಾರ ಅಧ್ಯಯನ/ಶಿಕ್ಷಣ

ಜೂ.1ರಂದು ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ

ಜೂ.2ರಂದು ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ ಮನಃಶಾಸ್ತ್ರ

ಜೂ.3ರಂದು ಹಿಂದಿ ಭಾಷೆ

ಜೂ.4ರಂದು ಅರ್ಥಶಾಸ್ತ್ರ

ಜೂ.5ರಂದು ಕನ್ನಡ ಭಾಷೆ

ಜೂ.7ರಂದು ಇಂಗ್ಲಿಷ್ ಭಾಷೆ

ಜೂ.8ರಂದು ಮಾಹಿತಿ ತಂತ್ರಜ್ಞಾನ/ಹೆಲ್ತ್ ಕೇರ್/ವೆಲೆನೆಸ್ ಬ್ಯೂಟಿ ಸೇರಿದಂತೆ ಇತರೆ ವಿಷಯಗಳು

ಜೂ.9ರಂದು ಸ್ಟ್ಯಾಟಿಟಿಕ್ಸ್/ಸಮಾಜಶಾಸ್ತ್ರ

ಜೂ.10ರಂದು ಭೂಗೋಳ ಪತ್ರಿಕೆಗಳ ಪರೀಕ್ಷೆಗಳು ನಡೆಯಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷ: ಜೂನ್ ಅಂತ್ಯಕ್ಕೆ ಪರೀಕ್ಷೆಗಳು ಮುಗಿದು ಫಲಿತಾಂಶ ಘೋಷಣೆಯಾಗುವುದರೊಂದಿಗೆ 2021ರ ಜುಲೈ 1 ರಿಂದ 2021-22ನೆ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್, ಪಿಯು ಇಲಾಖೆ ನಿರ್ದೇಶಕಿ ಸ್ನೇಹಲ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News