ಶಾಲಾ ಶುಲ್ಕ ಗೊಂದಲಕ್ಕೆ ರಾಜ್ಯ ಸರಕಾರ ತೆರೆ: ಶೇ.70ರಷ್ಟು ಬೋಧನಾ ಶುಲ್ಕ ಪಡೆಯಲು ಆದೇಶ

Update: 2021-01-29 14:12 GMT

ಬೆಂಗಳೂರು, ಜ.29: ಕೋವಿಡ್ ಸಂಕ್ರಮಣ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿದ್ದ ಶಾಲಾ ಶುಲ್ಕ ನಿಗದಿಗೆ ಸರಕಾರ ತೆರೆ ಎಳೆದಿದ್ದು, ಕಳೆದ ವರ್ಷದಲ್ಲಿ ಆಯಾ ಶಾಲೆಗಳ ಬೋಧನಾ ಶುಲ್ಕದ ಶೇ.70ರಷ್ಟನ್ನು ಮಾತ್ರವೆ ಈ ವರ್ಷದ ಒಟ್ಟು ಶಾಲಾ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಲಾ ಶುಲ್ಕ ಕಡಿತಕ್ಕೆ ಸಂಬಂಧಿಸಿದ ಈ ನಿರ್ಧಾರಕ್ಕೆ ಬರುವ ಮುಂಚೆ ಹಲವಾರು ಸುತ್ತು ಶಾಲಾ ಶಿಕ್ಷಣದ ಪಾಲುದಾರರೆಲ್ಲರೊಂದಿಗೆ ಚರ್ಚಿಸಿ ಕೊನೆಯಲ್ಲಿ ಮುಖ್ಯಮಂತ್ರಿಯ ಗಮನಕ್ಕೆ ತಂದು ಶುಲ್ಕ ನಿಗದಿ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಈ ಸಾಲಿಗೆ ಮಿತಗೊಂಡಂತೆ ರಾಜ್ಯದಲ್ಲಿರುವ ಯಾವುದೇ ಮಾದರಿಯ ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲೆಗಳು ಕಳೆದ ಸಾಲಿನ ಅಂದರೆ 2019-20ನೇ ಸಾಲಿನ ಬೋಧನಾ ಶುಲ್ಕದ ಶೇ.70ರಷ್ಟು ಭಾಗವನ್ನು ಮಾತ್ರ ಪೋಷಕರಿಂದ ಈ ಸಾಲಿನ ಒಟ್ಟು ಶುಲ್ಕವಾಗಿ ಪಡೆಯಬೇಕು. ಈ ಬಾರಿ ಅವಧಿ ಶುಲ್ಕವನ್ನು ಹೊರತುಪಡಿಸಿ ಯಾವುದೆ ಅಭಿವೃದ್ಧಿ ಶುಲ್ಕಗಳನ್ನು ಶಾಲೆಗಳು ಪಡೆಯುವಂತಿಲ್ಲ. ವಿವಿಧ ಟ್ರಸ್ಟ್ ಗಳಿಗೆ ಯಾವುದೇ ವಂತಿಗೆಯನ್ನು ಪಡೆಯುವಂತಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದರು.

2020-21ನೇ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಮೇಲೆ ತಿಳಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದಿದ್ದಲ್ಲಿ 2021-22ನೇ ಸಾಲಿನಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಯಾವುದೇ ಶಿಕ್ಷಣ ಸಂಸ್ಥೆ ಮೇಲೆ ತಿಳಿಸಿರುವ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ವಿಧಿಸಲು ಇಚ್ಛಿಸಿದಲ್ಲಿ ಅದಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.

ಶುಲ್ಕವನ್ನು ಕಂತುಗಳಲ್ಲಿ ಪಾವತಿಸಲು ಪೋಷಕರಿಗೆ ಅವಕಾಶವನ್ನು ಕಲ್ಪಿಸಬೇಕು. ಶುಲ್ಕ ರಿಯಾಯಿತಿ ಕುರಿತಂತೆ ಪೋಷಕರು/ಶಾಲೆಗಳು ಯಾವುದೇ ತಕರಾರು ಹೊಂದಿದ್ದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಯುಕ್ತ ಸಮಿತಿ ರಚಿಸಿ ಅದರ ಮೂಲಕ ಇಂತಹ ದೂರು ಪ್ರಕರಣಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕೊರೋನ ಸಾಂಕ್ರಾಮಿಕ ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹಲವಾರು ತಿಂಗಳುಗಳ ಕಾಲ ಮಕ್ಕಳು ಶಾಲೆಗೆ ಹೋಗದಂತಹ ಸಂದರ್ಭ ಬಂದೊದಗಿತ್ತು. ಕೊರೋನ ಹಿನ್ನೆಲೆಯಲ್ಲಿ ಎಲ್ಲ ಸ್ತರದ ಜನರೂ ಒಂದಲ್ಲ ಒಂದು ರೀತಿಯ ಆರ್ಥಿಕ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಹಾಗೆಯೇ ಖಾಸಗಿ ಶಾಲೆಗಳೂ ಶಾಲಾರಂಭವಾಗದೇ ಇರುವುದರಿಂದ ಶುಲ್ಕ ಪಾವತಿಯಾಗದೇ ತಮ್ಮ ಸಿಬ್ಬಂದಿಗೆ ವೇತನ ಪಾವತಿಗೆ ತೊಂದರೆ ಅನುಭವಿಸುತ್ತಿರುವುದನ್ನೂ ಸರಕಾರ ಗಮನಿಸಿದೆ ಎಂದು ಅವರು ಹೇಳಿದರು.

ಪೋಷಕರು, ಖಾಸಗಿ ಶಾಲಾ ಸಂಸ್ಥೆಗಳ ಸಂಘಟನೆಗಳು ಸೇರಿದಂತೆ ಹಲವರೊಂದಿಗೆ ಹಲವಾರು ಸುತ್ತಿನ ಚರ್ಚೆಗಳು, ಸಮಾಲೋಚನೆಗಳನ್ನು ನಡೆಸಲಾಗಿದೆ. ಕಳೆದ ಸಾಲಿನ ಆಗಸ್ಟ್ 7ರಂದು ಶುಲ್ಕ ನಿಗದಿ ಕುರಿತಂತೆ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ. ನ.27ರಂದು ಖಾಸಗಿ ಆಡಳಿತ ಮಂಡಳಿಗಳ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಲಾಗಿದೆ. ಡಿ.14, 20, 24ರಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಎಫ್‍ಕೆಸಿಸಿಐ ಪ್ರತಿನಿಧಿಗಳು, ಪೋಷಕರ ಪ್ರತಿನಿಧಿಗಳೊಂದಿಗೆ ಶುಲ್ಕ ನಿಗದಿ ಕುರಿತು ಸಭೆಗಳು ನಡೆದಿವೆ. ಪ್ರಸಕ್ತ ಸಾಲಿನ ಜ.15ರಂದು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.

ಈ ಎಲ್ಲ ಹತ್ತು ಹಲವು ಸಭೆಗಳ/ಸಂವಾದಗಳ ತರುವಾಯ ಅಂತಿಮವಾಗಿ ಈ ಕುರಿತಂತೆ ಪ್ರಧಾನ ಕಾರ್ಯದರ್ಶಿ, ಆಯುಕ್ತರೊಂದಿಗೆ ಕೂಲಂಕಶವಾಗಿ ಚರ್ಚಿಸಿದ ನಂತರ, ಜ.28ರಂದು ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿರುವ ಹಲವಾರು ಪೋಷಕರು ಕೊರೋನ ಸಂದರ್ಭದಲ್ಲಿನ ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಶುಲ್ಕ ಪಾವತಿಯಿಂದ ಹೆಚ್ಚಿನ ವಿನಾಯಿತಿಯನ್ನು ನೀಡಲು ಹಲವು ಸಂದರ್ಭಗಳಲ್ಲಿ ಪ್ರತಿಭಟನೆಯ ಮೂಲಕ ಸರಕಾರದ ಗಮನಕ್ಕೆ ತಂದಿದ್ದಾರೆ. ಹಲವಾರು ಪೋಷಕರು ಶಾಲೆಗಳಿಗೆ ಶುಲ್ಕ ಪಾವತಿಸುವುದನ್ನು ನಿಲ್ಲಿಸಿರುವ ಕಾರಣ, ಖಾಸಗಿ ಶಾಲೆಗಳು ಸಂಕಷ್ಟವನ್ನು ಎದುರಿಸುತ್ತಿವೆ. ಶಿಕ್ಷಣ ಕಾಯಿದೆಯನುಸಾರ, ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕಿರುವ ಅಧಿಕಾರ, ಅಸಾಧಾರಣ ಸನ್ನಿವೇಶವಾಗಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಾಯಿದೆಯ ಅವಕಾಶಗಳನ್ನು ಉಲ್ಲೇಖಿಸಿ ಸರಕಾರದ ಪರಮಾಧಿಕಾರದ ಕುರಿತಂತೆ ನಿಲುವು ತೆಗೆದುಕೊಳ್ಳಲು ನಿರ್ಣಯಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಮಕ್ಕಳ ಕಾಳಜಿ ಮುಖ್ಯ: ಮಕ್ಕಳು ಉತ್ತಮ ಹಾಗೂ ಸೌಹಾರ್ದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬುದು ಶಾಲೆಗಳ ಮತ್ತು ಪೋಷಕರ ಪ್ರಮುಖ ಉದ್ದೇಶವಾಗಿರುವುದು ಮುಂದುವರಿಸಲು ಎಲ್ಲ ಶೈಕ್ಷಣಿಕ ಪಾಲುದಾರರು, ಇದನ್ನು ಸಮ್ಮತಿಸಿ ಮುಂದುವರಿಯುವುದು ಉತ್ತಮ ಎಂದ ಸುರೇಶ್ ಕುಮಾರ್, ‘ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಎನ್ನುವಂತಾಗಿ ನಮ್ಮ ಮಕ್ಕಳಿಗೆ ಅನ್ಯಾಯವಾಗಬಾರದು ಎಂದರು.

ರಾಜ್ಯ ಸರಕಾರದ ಆದೇಶದಂತೆ ನಾವು ಶೇ.70ರಷ್ಟು ಶುಲ್ಕವನ್ನು ಮಾತ್ರ ಪಡೆಯುತ್ತೇವೆ. ಉಪನ್ಯಾಸಕರಿಗೆ ಸಂಬಳ ಕೊಡೋದು ಸ್ವಲ್ಪ ಕಷ್ಟವಾಗುತ್ತೆ. ಆದರೂ ರಾಜ್ಯ ಸರಕಾರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ರೂಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಬೋಧನಾ ಶುಲ್ಕವನ್ನು ಬಿಟ್ಟು ಬೇರೆ ಶುಲ್ಕ ವಿಧಿಸಬಾರದೆಂದು ಒತ್ತಾಯಿಸಿದ್ದೆವು. ಅದರಂತೆ ರಾಜ್ಯ ಸರಕಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿರುವುದು ರಾಜ್ಯದ ವಿದ್ಯಾರ್ಥಿ ಹಾಗೂ ಪೋಷಕರಿಗೆಲ್ಲರಿಗೂ ಸಮಾಧಾನ ತಂದಿದೆ. ಸರಕಾರದ ಈ ಕ್ರಮವನ್ನು ಸಮಿತಿ ಸ್ವಾಗತಿಸುತ್ತದೆ. ಈ ಹಿನ್ನೆಲೆಯಲ್ಲಿ ಜ.31ರಂದು ಶಾಲಾ ಶುಲ್ಕ ಕಡಿತಕ್ಕೆ ಆಗ್ರಹಿಸಿ ಆಯೋಜಿಸಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದೇವೆ.

-ಯೋಗಾನಂದ, ಅಧ್ಯಕ್ಷ, ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News