ಮೇಲ್ಮನೆ ಅಹಿತಕರ ಘಟನೆಗೆ ಮಾಧುಸ್ವಾಮಿ, ಅಶ್ವತ್ಥನಾರಾಯಣ ಪ್ರಚೋದನೆ ಕಾರಣ: ಮಧ್ಯಂತರ ವರದಿಯಲ್ಲಿ ಉಲ್ಲೇಖ

Update: 2021-01-29 11:58 GMT
File Photo

ಬೆಂಗಳೂರು, ಜ.29: ವಿಧಾನಪರಿಷತ್‍ನಲ್ಲಿ ಡಿ.15ರಂದು ಸಭಾಪತಿ ಪೀಠದ ಸುತ್ತಮುತ್ತ ನಡೆದ ಅಹಿತಕರ ಘಟನೆಗೆ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಪ್ರಚೋದನೆ ನೀಡಿದ್ದು, ಪರಿಷತ್‍ನ ಕಾರ್ಯದರ್ಶಿಯ ಕರ್ತವ್ಯಲೋಪ ಹಾಗೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕೆಲ ಸದಸ್ಯರ ಅನುಚಿತ ವರ್ತನೆಗಳು ಪ್ರಮುಖ ಕಾರಣವಾಗಿದೆ ಎಂದು ಸದನ ಸಮಿತಿಯ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶುಕ್ರವಾರ ಡಿ.15ರಂದು ವಿಧಾನಪರಿಷತ್‍ನಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸದನ ಸಮಿತಿ ಇಂದು ಸದನಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಇದರಲ್ಲಿ ಮಧ್ಯಮಗಳ ವರದಿ, ದೃಶ್ಯಾವಳಿಗಳು, ಪರಿಷತ್‍ನ ದಂಡ ನಾಯಕ ಗೋಪಾಲರೆಡ್ಡಿ, ಪರಿಷತ್‍ನ ಸದಸ್ಯ ಪಿ.ಆರ್.ರಮೇಶ್, ಮಾರ್ಷಲ್‍ಗಳು ಸೇರಿದಂತೆ ಹಲವರ ಹೇಳಿಕೆಗಳನ್ನು ಆಧರಿಸಿ ಮಧ್ಯಂತರ ವರದಿಯನ್ನು ಸಿದ್ಧಪಡಿಸಿ ಸದನಕ್ಕೆ ಒಪ್ಪಿಸಲಾಗಿದೆ.

ಮಧ್ಯಮಂತರ ವರದಿಯ ಪ್ರಮುಖ ಶಿಫಾರಸುಗಳು:

-ವಿಧಾನಪರಿಷತ್‍ನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ನಡಾವಳಿ ನಿಯಮಗಳ ಪ್ರಕಾರ ಸದನದಲ್ಲಿ ನಿರ್ವಹಿಸಬೇಕಾದ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳಲ್ಲಿ ವಿಫಲರಾಗಿರುವುದರಿಂದ ಈ ಅಹಿತಕರ ಘಟನೆ ನಡೆದಿದ್ದು, ಅದರ ಮೂಲಕ ಸದನದ ಮತ್ತು ಪೀಠದ ಗೌರವ ಮತ್ತು ಘನತೆಗೆ ಚ್ಯುತಿಯುಂಟಾಗಿರುತ್ತದೆ. ಈ ಸದನ ಸಮಿತಿಯು ತನ್ನ ಅಂತಿಮ ವರದಿ ಸಲ್ಲಿಸುವವರೆಗೆ ಕಾರ್ಯದರ್ಶಿಯವರು ವಿಧಾನ ಪರಿಷತ್‍ನ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡುತ್ತದೆ.

-ಕಾರ್ಯದರ್ಶಿಯವರ ಆಡಳಿತಾತ್ಮಕ ಕರ್ತವ್ಯ, ನಿರ್ಲಕ್ಷತೆ ಮತ್ತು ಬೇಜವಾಬ್ದಾರಿ ತನದ ವರ್ತನೆ ಬಗ್ಗೆ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖಾ ವಿಚಾರಣೆಗೆ ಒಳಪಡಿಸಲು ಕ್ರಮವಹಿಸುವಂತೆ ವಿಶೇಷ ಮಂಡಳಿಗೆ ಶಿಫಾರಸು ಮಾಡುತ್ತದೆ.

-ಉಪಸಭಾಪತಿ ನಿಯಮ ಬಾಹಿರವಾಗಿ ಸಭಾಪತಿ ಪೀಠವನ್ನು ಅಲಂಕರಿಸಲು ಪ್ರಚೋದನೆ ನೀಡಿದ ಕಾನೂನು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅಸಂಸದೀಯ ಮತ್ತು ಕಾನೂನು ಬಾಹಿರ ನಡವಳಿಕೆಯನ್ನು ಸಮಿತಿಯು ಖಂಡಿಸುತ್ತದೆ. ಈ ಸಂಬಂಧ ಇವರು ಸರಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲವೆಂದು ಶಿಫಾರಸು ಮಾಡುತ್ತದೆ.

-ಸಭಾಪತಿ ಪ್ರವೇಶಿಸುವ ದ್ವಾರವನ್ನು ಮುಚ್ಚುವ ಮೂಲಕ ಸಭಾಪತಿಯವರು ಸದನ ಪ್ರವೇಶವನ್ನು ನಿರ್ಬಂಧಿಸುವ ಪ್ರಕ್ರಿಯೆಯಲ್ಲಿ ತೊಡಗಿ ಅಸಂಸದೀಯ ಮತ್ತು ಕಾನೂನು ಬಾಹಿರ ನಡವಳಿಕೆಯನ್ನು ಪ್ರದರ್ಶಿಸಿರುವ ಸದಸ್ಯರಾದ ಎಂ.ಕೆ.ಪ್ರಾಣೇಶ್, ಡಾ.ವೈ.ಎ.ನಾರಾಯಣಸ್ವಾಮಿ, ಅರುಣ್ ಶಹಾಪುರ ಮುಂದಿನ ಎರಡು ಅಧಿವೇಶನದ ಅವಧಿಯ ಕಾರ್ಯಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡುತ್ತದೆ.

-ಉಪಸಭಾಪತಿ ವಿರುದ್ದ ಅಸಭ್ಯ ವರ್ತನೆ ತೋರಿದ ನಝೀರ್ ಅಹ್ಮದ್, ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ, ಶ್ರೀನಿವಾಸ ವಿ.ಮಾನೆ, ಪ್ರಕಾಶ್ ಕೆ.ರಾಥೋಡ್ ಇವರು ಮುಂದಿನ ಒಂದು ಅಧಿವೇಶನದ ಅವಧಿಯ ಕಾರ್ಯಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡುತ್ತದೆ.

-ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ಉಪಸಭಾಪತಿಯನ್ನು ನಿಯಮ ಬಾಹಿರವಾಗಿ ಸಭಾಪತಿ ಪೀಠದಲ್ಲಿ ಕೂರಿಸಿ ಸದನವನ್ನು ನಡಾವಳಿ ನಿಯಮಗಳ ವಿರೋಧವಾಗಿ ನಡೆಸಲು ಮುಂದಾದರು. ಹೀಗಾಗಿ ಈ ಸದಸ್ಯರು ಮುಂದಿನ ಎರಡು ಅಧಿವೇಶನದ ಕಾರ್ಯಕಲಾಪಗಳಲ್ಲಿ ನಿರ್ಬಂಧಿಸಲು ಶಿಫಾರಸು ಮಾಡುತ್ತದೆ.

-ಸಭಾನಯಕ ಶ್ರೀನಿವಾಸ ಪೂಜಾರಿ ಉಪಸಭಾಪತಿಯವರು ಸಭಾಪತಿ ಪೀಠದಲ್ಲಿ ಕುಳಿತ ನಂತರ ಪೀಠದ ಬಳಿ ಬಂದು ಅರುಣ್ ಶಹಾಪುರಗೆ ಕೈಸನ್ನೆ ಮಾಡುವುದರ ಮೂಲಕ ಪ್ರಚೋದಿಸುತ್ತಿರುವುದನ್ನು ಸಮಿತಿಯು ಗಂಭೀರವಾಗಿ ಪರಗಣಿಸಿ ಖಂಡಿಸುತ್ತದೆ. ಇವರು ಸರಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲವೆಂದು ಮತ್ತು ಮುಂದಿನ ಎರಡು ಅವಧಿಯ ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧಿಸಲು ಶಿಫಾರಸು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News