×
Ad

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ವಾರ್ತಾಭಾರತಿಯ 'ಅಡಿಕೆಗೆ ಡ್ರಗ್ಸ್ ಪಟ್ಟ' ವಿಶೇಷ ವರದಿ

Update: 2021-01-29 17:36 IST

ಬೆಂಗಳೂರು, ಜ. 29: ‘ಅಡಿಕೆಗೆ ಡ್ರಗ್ಸ್ ಪಟ್ಟ ನೀಡಿದ ರಾಜ್ಯ ಸರಕಾರ!' ಎಂಬ ತಲೆಬರಹದಲ್ಲಿ ‘ವಾರ್ತಾಭಾರತಿ' ಪತ್ರಿಕೆಯಲ್ಲಿ ಪ್ರಕಟವಾದ ಕರ್ನಾಟಕ ರಾಜ್ಯ ಕೃಷಿ-ಮಾರುಕಟ್ಟೆ ಮಂಡಳಿಯ ವೆಬ್‍ಸೈಟ್ ಪ್ರಮಾದದ ಕುರಿತ ವಿಶೇಷ ವರದಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯ ಹರತಾಳು ಹಾಲಪ್ಪ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಔಷಧ ಮತ್ತು ಮಾದಕ ಉತ್ತೇಜನಕಾರಿ ಎಂದು ಡ್ರಗ್ಸ್ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಡಿಕೆ ಫಸಲು ಬರುವ ಈ ಸಂದರ್ಭದಲ್ಲಿ ಬೆಲೆ ಕುಸಿತಕ್ಕೆ ಹೀಗೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರ ಮಾದಕವಸ್ತು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಸರಕಾರ ಇದನ್ನು ಸೇರಿಸಿದೆಯೇ? ಇಲ್ಲವೇ ಅಧಿಕಾರಿಗಳು ಸೇರಿಸಿದ್ದಾರೆಯೇ? ಸುಗ್ಗಿ ಕಾಲದಲ್ಲಿ ಈ ರೀತಿ ಮಾಡುವುದರಿಂದ ಅಡಿಕೆ ಧಾರಣೆ ಕುಸಿಯಲಿದ್ದು, ರೈತರಿಗೆ ತೊಂದರೆಯಾಗಲಿದೆ ಎಂದು ಹಾಲಪ್ಪ ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಹಿರಿಯ ಶಾಸಕ ಅರಗ ಜ್ಞಾನೇಂದ್ರ, ಅಡಿಕೆ ಬಗ್ಗೆ ಹೀಗೆ ಅಪಪ್ರಚಾರದಿಂದ 2 ಸಾವಿರ ರೂ. ನಷ್ಟು ಬೆಲೆ ಕುಸಿದಿದೆ. ಯಾರು ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿದವರು ಎಂಬ ಬಗ್ಗೆ ತನಿಖೆ ಆಗಬೇಕು. ಕೂಡಲೇ ಮಾದಕ ವಸ್ತುಗಳ ಪಟ್ಟಿಯಿಂದ ಅಡಿಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಬಳಿಕ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಇದು ವೆಬ್‍ಸೈಟ್‍ನವರು ಮಾಡಿರುವುದರಿಂದ ತಪ್ಪಾಗಿದೆ. ಆದಷ್ಟು ಶೀಘ್ರದಲ್ಲೆ ಇದನ್ನು ಸರಿಪಡಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಸದನಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News