×
Ad

ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಕನ್ನಡ ಪರ ಸಂಘಟನೆಗಳ ಆಕ್ರೋಶ

Update: 2021-01-29 18:42 IST

ಬೆಂಗಳೂರು, ಜ.29: ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಕುರಿತು ಕನ್ನಡ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರಕಾರ ಇದಕ್ಕೆ ತಕ್ಕ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಹಳೇ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಕಾರವಾರ ಸಹಕಾರಿ ಬ್ಯಾಂಕ್ ಮರಾಠಿ ಭಾಷೆ ಬಳಕೆ, ಬೆಳಗಾವಿ ಮೇಲ್ಸುತುವೆ ಬಳಿ ಮರಾಠಿ ಭಾಷೆ ಬಳಕೆ ಬಗ್ಗೆ ಸಾಕ್ಷಿ ಉಲ್ಲೇಖಿಸಿರುವುದು ಸರಿಯಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಸಂಘಟನಾಕಾರರು ಹೇಳಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ನೆಲ, ಜಲದ ವಿಚಾರವಾಗಿ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕನ್ನಡಪರ ಸಂಘಟನೆಗಳೂ ನಮ್ಮ ಜವಾಬ್ದಾರಿಗೆ ಸದಾ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತೋರ್ವ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ, ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ನಿಮ್ಮ ಚೇಷ್ಠೆ ಬಿಟ್ಟುಬಿಡಿ. ಹಳೇ ವಿಡಿಯೊ, ಸಿಡಿ ತೋರಿಸಿ ಕನ್ನಡಿಗರ ಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ. ಒಂದು ಹಿಡಿ ಮಣ್ಣನ್ನೂ ಮುಟ್ಟಲೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೊಲ್ಲಾಪುರ, ಮುಂಬೈ ನಗರಗಳಲ್ಲಿ ಅನೇಕ ಕನ್ನಡಿಗರಿದ್ದಾರೆ. ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡಿನ ವಿಸ್ತಾರ ಇದೆ. ಹೀಗಾಗಿ, ನಿಮ್ಮ ರಾಜ್ಯದ ಭಾಗವನ್ನೂ ಬಿಟ್ಟುಕೊಡಿ ಎಂದು ಹೇಳಬಹುದಾಗಿದೆ ಎಂದಿರುವ ಅವರು, ಕನ್ನಡಿಗರು ವಿಶಾಲ ಹೃದಯದವರು. ಎಲ್ಲ ಭಾಷೆಯ ಶಾಲೆ ತೆರೆಯಲು ಕಾರವಾರ, ನಿಪ್ಪಾಣಿ, ಬೆಳಗಾವಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಕನ್ನಡಿಗರ ತಂಟೆಗೆ ಬರಬಾರದು. ಸರಕಾರ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ತರಬೇಕು. ರಾಜ್ಯ ಸರಕಾರವೂ ಗಡಿ ಹಾಗೂ ಕನ್ನಡದ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News