ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ' ಹೆಸರಿಡಲು ವಿಧಾನಸಭೆಯಲ್ಲಿ ಉಮಾನಾಥ್ ಕೋಟ್ಯಾನ್ ಒತ್ತಾಯ
ಬೆಂಗಳೂರು, ಜ.29: ‘ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಅವಳಿ ವೀರಪುರಷರಾದ ಕೋಟಿ-ಚೆನ್ನಯ ಅವರ ಹೆಸರಿಡಬೇಕು' ಎಂದು ಆಡಳಿತ ಪಕ್ಷದ ಶಾಸಕ ಉಮಾನಾಥ್ ಎ.ಕೋಟ್ಯಾನ್ ಇಂದಿಲ್ಲಿ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಇದೀಗ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯನ್ನು ಅದಾನಿ ಸಂಸ್ಥೆಗೆ ವಹಿಸಲಾಗಿದೆ. ಹೀಗಾಗಿ ಅದಾನಿ ಸಂಸ್ಥೆ ವಿಮಾನ ನಿಲ್ದಾಣಕ್ಕೆ ಅದಾನಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡಲಾಗಿದೆ. ಈ ವಿಚಾರಕ್ಕೆ ಕರಾವಳಿ ಭಾಗದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಆ ಭಾಗದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಅವಳಿ ವೀರಪುರಷರಾದ ಕೋಟಿ-ಚೆನ್ನಯ ಅವರ ಹೆಸರನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇರಿಸಬೇಕು ಎಂದು ಸದಸ್ಯ ಉಮಾನಾಥ್ ಕೋಟ್ಯಾನ್ ಒತ್ತಾಯಿಸಿದರು.
ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಅದಾನಿ ಸಂಸ್ಥೆಗೆ ಕೇಂದ್ರ ಸರಕಾರ ಗುತ್ತಿಗೆ ನೀಡಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇನೆ. ಅಲ್ಲದೆ, ವಿಮಾನ ನಿಲ್ದಾಣದ ಹೆಸರು ಬದಲಿಸಲು ಪ್ರಯತ್ನಿಸುತ್ತೇನೆ ಎಂದು ಸದನಕ್ಕೆ ಭರವಸೆ ನೀಡಿದರು.