ವಿಧಾನಸಭೆ ಅಧಿವೇಶನ: ಒಂದೇ ದಿನ ಹನ್ನೊಂದು ವಿಧೇಯಕಗಳ ಮಂಡನೆ

Update: 2021-01-29 14:34 GMT

ಬೆಂಗಳೂರು, ಜ. 29: ರಾಜ್ಯದಲ್ಲಿನ ಹಣಕಾಸು ಸಂಸ್ಥೆಗಳಿಂದ ಜನರಿಗೆ ಆಗುವ ವಂಚನೆ ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ), ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ವ್ಯವಸ್ಥಾಪನಾ ಮಂಡಳಿ ರಚನೆಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ(ತಿದ್ದುಪಡಿ)ವಿಧೇಯಕ ಸೇರಿದಂತೆ ಒಟ್ಟು 11 ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಶುಕ್ರವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಪೌರಾಡಳಿತ ಸಚಿವ ನಾಗರಾಜ್(ಎಂಟಿಬಿ) ಪ್ರತ್ಯೇಕವಾಗಿ ವಿಧೇಯಕಗಳನ್ನು ಮಂಡಿಸಿದರು. ಕೋವಿಡ್-19 ಸೇರಿ ಸಾಂಕ್ರಾಮಿಕ ರೋಗ ತಡೆಯುವಲ್ಲಿ ಕಾರ್ಯನಿರತ ನೌಕರನ ವಿರುದ್ಧ ಹಿಂಸಾತ್ಮಕ ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಲಾಗಿದೆ.

ಖಾಸಗಿ ವಿವಿ ಸ್ಥಾಪಿಸುವ ಉದ್ದೇಶದಿಂದ ಶ್ರೀಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ, ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ, ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ, ಬೆಂಗಳೂರಲ್ಲಿ ಸ್ಥಾಪನೆ ಮಾಡಿ ಅದಕ್ಕೆ ಸಂಬಂಧ ಕ್ರಮಗಳನ್ನು ಕೈಗೊಳ್ಳುವ ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, ಲೋಕಾಯುಕ್ತ ಮತ್ತು ಉಪಲೋಕಾಯುಕ್ತರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವೇತನಕ್ಕೆ ಸಮಾನವಾದ ವೇತನ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ.

ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆಯಲ್ಲಿ ಬದಲಿಸುವ ಸಂಬಂಧ ಕರ್ನಾಟಕ ಪೌರಸಭೆಗಳ(ಎರಡನೇ ತಿದ್ದುಪಡಿ) ವಿಧೇಯಕ, ವಾಹನಗಳ ಮಾಲಕತ್ವ ಮತ್ತು ತೆರಿಗೆ ವಸೂಲಿ ಸಂಬಂಧ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕ, ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ನೀಡುವ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕಗಳನ್ನು ಮಂಡನೆ ಮಾಡಲಾಗಿದೆ.

ಜೈಲು ಶಿಕ್ಷೆ: ಸಾಂಕ್ರಾಮಿಕ ರೋಗ ತಡೆಯಲು ಕಾರ್ಯನಿರ್ವಹಿಸುವ ಅಧಿಕಾರಿ, ನೌಕರನಿಗೆ ಯಾವುದೇ ವ್ಯಕ್ತಿಯು ಅಡಚಣೆಯನ್ನು ಮಾಡುವಂತಿಲ್ಲ. ನೌಕರರ ವಿರುದ್ಧ ಹಿಂಸಾಚಾರ ಕೃತ್ಯ ಎಸಗುವುದು, ಸಾರ್ವಜನಿಕ ಅಥವಾ ಖಾಸಗಿ ಸ್ವತ್ತಿಗೆ ನಷ್ಟವನ್ನುಂಟು ಮಾಡಬಾರದು. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 6 ತಿಂಗಳಿಗೆ ಕಡಿಮೆ ಇಲ್ಲದೆ ಮತ್ತು 7 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳಿಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ. ವರೆಗೆ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಕೋರ್ಟ್ ಗೆ ಅಧಿಕಾರ: ಹಣಕಾಸು ಸಂಸ್ಥೆ ಭರವಸೆ ನೀಡಿದಂತೆ ಅವಧಿಯು ಪೂರ್ಣಗೊಂಡ ಮೇಲೆ ಬಡ್ಡಿ, ಬೋನಸ್ ಜತೆಗೆ ಠೇವಣಿಯ ಮರುಸಂದಾಯ ಮಾಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಠೇವಣಿ ಮರು ಸಂದಾಯ ಮಾಡದೆ ವಂಚನೆ ಮಾಡಿದರೆ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರಿಯಾಗಿ ಸಹಾಯಕ ಆಯುಕ್ತರ ಹುದ್ದೆಗೆ ಕಡಿಮೆ ಇಲ್ಲದೆ ಒಬ್ಬ ಅಧಿಕಾರಿ ನೇಮಕ ಮಾಡುವುದು. ನೇಮಕದ ದಿನಾಂಕದಿಂದ 30ದಿನದಲ್ಲಿ ವರದಿ ವಿಶೇಷ ಕೋರ್ಟ್ ಸಲ್ಲಿಸಬೇಕು. ಜಫ್ತಿ ಮಾಡಲಾದ ಸ್ವತ್ತುಗಳ ಮೌಲ್ಯ ನಿರ್ಧಾರ ಮತ್ತು ಶೀಘ್ರ ಮಾರಾಟಕ್ಕೆ ನ್ಯಾಯಾಲಯಕ್ಕೆ ಅಧಿಕಾರ ನೀಡಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News