ಶಿಕ್ಷಕರನ್ನು ಕೊರೋನ ವಾರಿಯರ್ಸ್ ಆಗಿ ಪರಿಗಣಿಸಿ: ಪ್ರಧಾನಿಗೆ ಪತ್ರ ಬರೆದ ಸಚಿವ ಸುರೇಶ್ ಕುಮಾರ್

Update: 2021-01-29 14:56 GMT

ಬೆಂಗಳೂರು, ಜ.29: ರಾಜ್ಯದೆಲ್ಲೆಡೆಯ ಶಾಲಾ ಶಿಕ್ಷಕರನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲು ಆದ್ಯತೆ ನೀಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಶುಕ್ರವಾರ ಪ್ರಧಾನಿ ಮತ್ತು ಕೇಂದ್ರ ಆರೋಗ್ಯ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಕೋವಿಡ್ ವಾರಿಯರ್ಸ್ ಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡುತ್ತಿರುವುದು ಅತ್ಯಂತ ಸಮಂಜಸವಾದ ವಿಚಾರವಾಗಿದೆ. ಅದೇ ರೀತಿ ಶಿಕ್ಷಕರನ್ನೂ ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೂ ಲಸಿಕೆ ನೀಡಲು ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಈಗಾಗಲೇ ನಮ್ಮ ಸರಕಾರದ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗುಹಾ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಶಿಕ್ಷಣ ಇಲಾಖೆ ನೌಕರರನ್ನೂ ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ಆದ್ಯತೆ ನೀಡಬೇಕೆಂದು ಕೋರಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಶಾಲಾ ಶಿಕ್ಷಕರು ಕೋವಿಡ್ ವಾರಿಯರ್ಸ್ ಆಗಿ ಕಂಟೈನ್ಮೆಂಟ್ ವಲಯಗಳಲ್ಲಿ ಕೆಲಸ ಮಾಡುವ ಮೂಲಕ ಕೋವಿಡ್ ತಡೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಶಿಕ್ಷಕರು ಮನೆಮನೆಗೆ ಭೇಟಿ ನೀಡಿ ಅಂಕಿ ಅಂಶ ಸಂಗ್ರಹಣೆ, ಸುರಕ್ಷಿತ ಅಂತರದ ಮಹತ್ವದ ತಿಳುವಳಿಕೆ ಮೂಡಿಸಿದ್ದಾರೆ. ಈಗ ಶಾಲೆಗಳು ಆರಂಭವಾಗಿದ್ದು, ಅವರೆಲ್ಲ ತರಗತಿಗಳಲ್ಲಿ ಮಕ್ಕಳ ಸಮೂಹದ ಸಂಪರ್ಕಕ್ಕೆ ಬರುತ್ತಿರುವುದರಿಂದ ಮಕ್ಕಳ ಮತ್ತು ಅವರ ಹಿತದೃಷ್ಟಿಯಿಂದ ಶಿಕ್ಷಕರಿಗೆ ಲಸಿಕೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಕರು ವ್ಯಾಕ್ಸಿನ್ ಪಡೆಯಲು ಅನುವಾಗುವಂತೆ ಶಿಕ್ಷಕರನ್ನು ಕೋವಿಡ್-19 ವಾರಿಯರ್ಸ್ ಎಂದು ಪರಿಗಣಿಸಬೇಕೆಂದು ಕೋರಿ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News