×
Ad

ಸದನಕ್ಕೆ ನೂತನ ಸಚಿವರನ್ನು ಪರಿಚಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2021-01-29 20:56 IST

ಬೆಂಗಳೂರು, ಜ. 29: ತಮ್ಮ ನೇತೃತ್ವದ ಸಚಿವ ಸಂಪುಟಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಏಳು ಮಂದಿ ನೂತನ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆ ಕಲಾಪದಲ್ಲಿ ಸದನಕ್ಕೆ ಪರಿಚಯಿಸಿ ಅಭಿನಂದಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಗೂ ಮೊದಲೇ ತಮ್ಮ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಆಹಾರ ಸಚಿವ ಉಮೇಶ್ ಕತ್ತಿ, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ, ಮೀನುಗಾರಿಕೆ ಸಚಿವ ಎಸ್.ಅಂಗಾರ, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ತೋಟಗಾರಿಕೆ ಮತ್ತು ರೇಶ್ಮೆ ಸಚಿವ ಆರ್.ಶಂಕರ್ ಹಾಗೂ ಪೌರಾಡಳಿತ ಸಚಿವ ನಾಗರಾಜ್ ಎಂಟಿಬಿ ಅವರನ್ನು ಸದನಕ್ಕೆ ಪರಿಚಯಿಸಿದರು.

ಅನಂತರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಆಹಾರ ಸಚಿವ ಉಮೇಶ್ ಕತ್ತಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಅಲ್ಲದೆ, ನೂತನ ಸಚಿವರಿಗೆ ಆಡಳಿತ ಮತ್ತು ಪ್ರತಿನಿಧಿಗಳ ಸದಸ್ಯರ ಕೈಕುಲು ಅಭಿನಂದನೆ ಸಲ್ಲಿಸಿದ್ದ ಪ್ರಸಂಗ ನಡೆಯಿತು.

ಪುರಸ್ಕೃತರಿಗೆ ಸದನದ ಅಭಿನಂದನೆ: ಪ್ರತಿಷ್ಠಿತ ಪದ್ಮ ಪುರಸ್ಕಾರಕ್ಕೆ ಭಾಜರಾಗಿರುವ ರಾಜ್ಯದ ಪ್ರಸಿದ್ಧ ವೈದ್ಯ ವಿಜ್ಞಾನಿ, ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗ್ಡೆಗೆ ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ವೇದವಿಜ್ಞಾನಿ ಡಾ.ಆರ್.ಎನ್.ಕಶ್ಯಪ್, ಕ್ರೀಡಾಪಟು ಕೆ.ವೈ.ವೆಂಕಟೇಶ್‍ಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಪದ್ಮಪುರಸ್ಕಾರಕ್ಕೆ ಭಾಜನರಾಗಿರುವ ರಾಜ್ಯದ ಎಲ್ಲ ಗಣ್ಯ ಸಾಧಕರಿಗೆ ಸದನದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News