ಎಸ್ಪಿ ಕಚೇರಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡುವ ಬಗ್ಗೆ ಸಿಎಂಸಿ ಸಭೆ ಬಳಿಕ ತೀರ್ಮಾನ: ಚಿಕ್ಕಮಗಳೂರು ಎಸ್ಪಿ

Update: 2021-01-29 15:30 GMT
ಎಂ.ಎಚ್.ಅಕ್ಷಯ್

ಚಿಕ್ಕಮಗಳೂರು, ಜ.29: ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಿರ್ಮಿಸಲಾಗುತ್ತಿರುವ ಪೊಲೀಸ್ ವೃತ್ತಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರಿಡುವ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಿಎಂಸಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಎಸ್ಪಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.

ಶುಕ್ರವಾರ ಎಸ್ಪಿ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎಸ್ಪಿ ಕಚೇರಿ ಎದುರು ನಿರ್ಮಿಸಲಾಗುತ್ತಿರುವ ಪೊಲೀಸ್ ವೃತ್ತಕ್ಕೆ ದಿವಂಗತ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರಿಡಬೇಕೆಂದು ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ನಗರಸಭೆಯ ಸಿಎಂಸಿ ಸಭೆಯಲ್ಲಿ ಚರ್ಚಿಸಬೇಕಿದೆ. ಚರ್ಚೆಯ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನಕೈಗೊಂಡಿಲ್ಲ ಎಂದರು.

ಪ್ರವಾಸಿಗರ ಸೋಗಿನಲ್ಲಿ ಜಿಲ್ಲೆಯಲ್ಲಿದೆ ಕಳ್ಳರ ತಂಡ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಸದ್ಯ ಕಾಫಿ, ಅಡಿಕೆ ಬೆಳೆಗಳ ಕಟಾವು ಕೆಲಸ ನಡೆಯುತ್ತಿದ್ದು, ಅಲ್ಲಲ್ಲಿ ಕಾಫಿ, ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಕಾಫಿ, ಅಡಿಕೆ ಕೊಯ್ಲು ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯ ಹಲವೆಡೆ ದಾಖಲಾಗಿದ್ದು, ಇಂತಹ ಪ್ರಕರಣಗಳ ಬೇಧಿಸಲು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಕಳ್ಳರ ಒಂದು ತಂಡ ಪ್ರವಾಸಿಗರ ಸೋಗಿನಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ತಂಡದ ಸದಸ್ಯರು ರಾತ್ರಿ ವೇಳೆ ಬೈಕ್‍ಗಳಲ್ಲಿ ಒಂಟಿ ಮನೆಗಳ ಮಾಹಿತಿ ಸಂಗ್ರಹಿಸಿ ಸಮಯ ನೋಡಿ ಕಳ್ಳತನ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ತಂಡದ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದರು.

ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ: ಈಗಾಗಲೇ ಬಾಳೆಹೊನ್ನೂರಿನಲ್ಲಿ ಅಡಿಕೆ ಕಳ್ಳತನ ಮಾಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಜಿಲ್ಲೆಯ ಅಜ್ಜಂಪುರ ಪೊಲೀಸರು ಅಡಿಕೆ ಕಳ್ಳತನ ಮಾಡಿದ್ದ 2 ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದಾರೆ. ಸಖರಾಯಪಟ್ಟಣ ಪೊಲೀಸರು 3 ಪ್ರಕರಣಗಳನ್ನು ಬೇಧಿಸಿದ್ದಾರೆ. ಬೀರೂರು ಪೊಲೀಸರು 3 ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ ಅವರು, ಕಾಫಿ, ಅಡಿಕೆ ಬೆಳೆಗಾರರು, ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವ ಮೂಲಕ ಇಂತಹ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನಿರ್ಭಯ ನಿಧಿಯಡಿಯಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ: ಕೇಂದ್ರ ಸರಕಾರದ ನಿರ್ಭಯ ನಿಧಿಯಡಿಯಲ್ಲಿ ಬಂದ ಅನುದಾನದಲ್ಲಿ ರಾಜ್ಯ ಸರಕಾರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲು ಅನುದಾನ ನೀಡಿದೆ. ಅನುದಾನದಡಿಯಲ್ಲಿ ಪ್ರತೀ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ನಡೆಸಲು ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ. ಜಿಲ್ಲೆಗೆ 29 ಬೈಕ್‍ಗಳನ್ನು ನಿರ್ಭಯ ನಿಧಿಯಲ್ಲಿ ಸರಕಾರ ನೀಡಿದ್ದು, ಇದರೊಂದಿಗೆ ಮಹಿಳಾ ಸಹಾಯವಾಣಿ ಕೇಂದ್ರಗಳಿಗೆ ಖುರ್ಚಿ, ಮೇಜು, ಕಂಪ್ಯೂಟರ್ ಸೇರಿದಂತೆ ಫೋಕ್ಸೊ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹ ನಿಷೇದ ಕಾಯ್ದೆಗಳಿಗೆ ಸಂಬಂಧಿಸಿದ ಪುಸಕ್ತಗಳನ್ನು ಈ ಮಹಿಳಾ ಸಹಾಯವಾಣಿ ಕೇಂದ್ರಗಳಿಗೆ ನೀಡಲಾಗಿದೆ. ಇವುಗಳ ಮೂಲಕ ಸಾರ್ವಜನಿಕರು, ಮಹಿಳೆಯಲ್ಲಿ ಜಾಗೃತಿ ಮೂಡಿಸುವುದು ಮತ್ತು ತುರ್ತು ಸೇವೆ ನೀಡುವುದು ಹಾಗೂ ಮಾನವ ಕಳ್ಳ ಸಾಗಣೆ ನಿಯಂತ್ರಣ ಮಾಡುವುದು ಈ ಮಹಿಳಾ ಕೇಂದ್ರದ ಉದ್ದೇಶವಾಗಿದೆ. ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಪ್ರತ್ಯೇಕ ಪೊಲೀಸರ ತಂಡ ಈ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಟಿಪ್ಪರ್ ಗಳ ವಿರುದ್ಧ ಕಾನೂನು ಕ್ರಮ: ನಗರದ ವ್ಯಾಪ್ತಿಯಲ್ಲಿ ಟಿಪ್ಪರ್ ವಾಹನಗಳು ಅತಿವೇಗದಿಂದ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಸಂಬಂಧ ಟಿಪ್ಪರ್ ಚಾಲಕರು, ಮಾಲಕರೊಂದಿಗೆ ಚರ್ಚಿಸಿ ಕಾನೂನಿನ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಇದನ್ನೂ ಮೀರಿ ಕಾನೂನು ಉಲ್ಲಂಘಿಸುವ ಟಿಪ್ಪರ್ ಗಳಿಗೆ ದಂಡ ವಿಧಿಸಲಾಗುತ್ತಿದೆ, ಆದರೂ ಟಿಪ್ಪರ್ ಗಳನ್ನು ಅತಿವೇಗದಿಂದ ಓಡಿಸುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಅವರು, ಈ ಬಾರಿ ಜಿಲ್ಲೆಯಾದ್ಯಂತ ಅಪಘಾತ ಪ್ರಕರಣಗಳು ಶೇ.10ರಷ್ಟು ಕಡಿಮೆಯಾಗಿವೆ. ಇದಕ್ಕೆ ಲಾಕ್‍ಡೌನ್ ಕಾರಣ ಇದ್ದರೂ ಇರಬಹುದು ಎಂದು ಎಸ್ಪಿ ಅಕ್ಷಯ್ ಇದೇ ವೇಳೆ ಹೇಳಿದರು.

ಪೊಲೀಸರೇ ಜನರ ಬಳಿಗೆ ಹೋಗುವ ತಂತ್ರಜ್ಞಾನ

ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಹಾಗೂ ಕೆಲ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಇಲಾಖೆಯಲ್ಲಿ ಸಿದ್ಧತೆಗಳು ನಡೆದಿವೆ. ಈ ನಿಟ್ಟಿನಲ್ಲಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು, ಸಂತ್ರಸ್ತರಿಗೆ ಶೀಘ್ರ ಪೊಲೀಸರ ನೆರವು, ಸೇವೆ ಒದಗಿಸಲು ಸಂಪೂರ್ಣ ತಂತ್ರಜ್ಞಾನ ಆಧರಿತ ಸೇವೆ ಒದಗಿಸಲು ಸಿದ್ಧತೆ ನಡೆದಿದೆ. ಈ ಯೋಜನೆಯಡಿಯಲ್ಲಿ ಸಂತ್ರಸ್ತರು, ತೊಂದರೆಗೊಳಗಾದವರು ಪೊಲೀಸ್ ಇಲಾಖೆಯ 112 ಸಂಖ್ಯೆ ಕರೆ ಮಾಡಿದಲ್ಲಿ ಪೊಲೀಸರೇ ಪೊಲೀಸ್ ಇಲಾಖೆಯ ವಾಹನವೊಂದರಲ್ಲಿ ಸಾರ್ವಜನಿಕರ ಬಳಿಗೆ ಧಾವಿಸಿ ಸೇವೆ ನೀಡುವಂತಹ ಯೋಜನೆ ಇದಾಗಿದೆ. ಈ ವಾಹನದಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಸಂತ್ರಸ್ತರು 112ಗೆ ಕರೆ ಮಾಡಿದಾದ ಆ ಕರೆಯನ್ನು ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿ ಸಿಬ್ಬಂದಿ ಸ್ವೀಕರಿಸಿ ಮಾಹಿತಿ ಪಡೆಯುತ್ತಾರೆ. ನಂತರ ಅವರು ಸಂಬಂಧಿಸಿದ ಜಿಲ್ಲೆಗಳ ಪೊಲೀಸ್ ಠಾಣಾ ವ್ಯಾಪ್ತಿಯ ಈ ತುರ್ತು ಸೇವಾ ವಾಹನಗಳ ತಂಡಕ್ಕೆ ಮಾಹಿತಿ ರವಾನಿಸುತ್ತಾರೆ. ಈ ಮಾಹಿತಿ ಪಡೆಯುವ ಪೊಲೀಸರು ಕೂಡಲೇ ಘಟನಾಸ್ಥಳಕ್ಕೆ ದೌಡಾಯಿಸಿ ತುರ್ತು ಪೊಲೀಸ್ ಸೇವೆ ನೀಡುವ ಯೋಜನೆ ಇದಾಗಿದೆ. ಶೀಘ್ರ ಈ ಯೋಜನೆ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿದೆ.

- ಅಕ್ಷಯ್ ಎಂ.ಎಚ್, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News