ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ವಾರದ ರಜೆ ನೀಡಲು ಡಿಜಿಪಿ ಪ್ರವೀಣ್ ಸೂದ್ ಆದೇಶ
ಬೆಂಗಳೂರು, ಜ.29: ರಾಜ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ವಾರದ ರಜೆ ಮಂಜೂರು ಮಾಡುವಂತೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.
ಪೊಲೀಸರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬೇಕಾದರೆ ವಾರಕ್ಕೊಮ್ಮೆ ರಜೆ ಕಡ್ಡಾಯವಾಗಿ ಬೇಕು. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ವಾರದ ರಜೆಯನ್ನು ಮಂಜೂರು ಮಾಡಬೇಕು. ರೊಟೇಷನ್ ಆಧಾರದ ಮೇಲೆ ವಾರಕ್ಕೊಮ್ಮೆ ಎಲ್ಲ ಪೊಲೀಸ್ ಸಿಬ್ಬಂದಿಗೂ ರಜೆ ಸೌಲಭ್ಯ ಸಿಗುವಂತೆ ಮಾಡಬೇಕು. ಬಂದೋಬಸ್ತ್ ನೈಸರ್ಗಿಕ ವಿಕೋಪ, ಚುನಾವಣೆ ಸಂದರ್ಭ ಹೊರತುಪಡಿಸಿ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿಗೆ ರಜೆ ಮಂಜೂರು ಮಾಡಬೇಕೆಂದು ಪೊಲೀಸ್ ಆಯುಕ್ತರಿಗೆ, ಜಿಲ್ಲಾ ಅಧೀಕ್ಷಕರಿಗೆ ಅಧಿಕೃತ ಜ್ಞಾಪನಾಪತ್ರ ರವಾನಿಸಿದ್ದಾರೆ.
ಅದೇ ರೀತಿ, ವಾರದ ರಜೆಗೆ ಪೊಲೀಸರಿಗೆ ಸಿಗಬೇಕಾಗಿರುವ ಭತ್ತೆ, ವೇತನವನ್ನು ಕಡಿತ ಮಾಡುವಂತಿಲ್ಲ. ಪೊಲೀಸ್ ಅಧೀಕ್ಷಕ ದರ್ಜೆಯ ಅಧಿಕಾರಿಗಳು ಈ ಸಂಬಂಧ ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು. ಅಲ್ಲದೇ ಪೊಲೀಸರ ರಜೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಡಿಜಿಪಿ ಸೂಚಿಸಿದ್ದಾರೆ.