ಕೆಂಪುಕೋಟೆ ಘಟನೆಗೂ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗೂ ಸಂಬಂಧವಿಲ್ಲ: ಬಡಗಲಪುರ ನಾಗೇಂದ್ರ

Update: 2021-01-29 17:52 GMT

ಮೈಸೂರು,ಜ.29: ಕೆಂಪುಕೋಟೆಯಲ್ಲಿ ನಡೆದ ಕೃತ್ಯಕ್ಕೂ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ರೈತರನ್ನು ಭಯೋತ್ಪಾದಕರಾಗಿ ಬಿಂಬಿಸುವುದನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ನಗರದ ಜಲದರ್ಶಿನಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಂಪುಕೋಟೆಯಲ್ಲಿ ನಡೆದ ಕೃತ್ಯದ ರೂವಾರಿ ಕೇಂದ್ರ ಸರ್ಕಾರವೇ ಹೊರತು ಅದರ ಹಿಂದೆ ಕಳೆದ 70 ದಿನಗಳಿಂದಲೂ ಶಾಂತಿಯುತವಾಗಿ ನಡೆಯುತ್ತಿರುವ ರೈತ ಚಳವಳಿಯ ಉದ್ದೇಶಿತ ಕಾರ್ಯಕ್ರಮವಲ್ಲ. ಈ ಆರೋಪವನ್ನು ಚಳವಳಿಯ ಮುಖಂಡರ ಮೇಲೆ ಹೊರಿಸಿರುವುದು, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲೆ ಮಾಡಿರುವುದು ಮತ್ತು ಚಳವಳಿ ನಿರತ ರೈತರನ್ನು ಭಯೋತ್ಪಾದಕರೆಂದು ಬಿಂಬಿಸುವುದು ಖಂಡನೀಯ ಎಂದರು.

ಅಂದು ನವದೆಹಲಿಯಲ್ಲಿ ನಡೆದ ಕೃತ್ಯದ ಬಗ್ಗೆ ವಿಷಾದವಿದೆ. ರೈತರ ಹೆಸರಿನಲ್ಲಿ ಚಳವಳಿ ಮಾಡಿಸುವ ಯಾರೇ ಆಗಲಿ ತತ್ವವನ್ನು ಪಾಲನೆ ಮಾಡಬೇಕು. ಚಳವಳಿಯನ್ನು ಶಾಂತಿಯುತವಾಗಿ ಸಂಘಟಿಸಬೇಕು. ರೈತರ ಹೆಸರಿನಲ್ಲಿ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗುವುದನ್ನು ರೈತ ಸಂಘಟನೆಗಳು ಸಹಿಸುವುದಿಲ್ಲ. ಈ ಕೃತ್ಯದಲ್ಲಿ ಭಾಗಿಯಾದ ಯಾರೇ ಆಗಲಿ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಚಳವಳಿಗಾರರನ್ನು ನೈತಿಕವಾಗಿ ಎದುರಿಸಲಾಗದ ಕೇಂದ್ರ ಸರ್ಕಾರ ಕೆಂಪುಕೋಟೆಯಲ್ಲಿ ಕೆಲವು ದುಷ್ಕರ್ಮಿಗಳು ನಡೆಸಿದ ಗಲಭೆಯನ್ನು ದುರುಪಯೋಗಪಡಿಸಿಕೊಂಡು ಶಾಂತಿಯುತವಾಗಿ ಚಳವಳಿ ನಿರತರನ್ನು ಬಲತ್ಕಾರದಿಂದ ಖಾಲಿ ಮಾಡಿಸುವುದು, ಗೂಂಡಾಗಳ ಮುಖಾಂತರ ಬೆದರಿಕೆ ಒಡ್ಡುವುದನ್ನು ಮಾಡುತ್ತಿದ್ದು ಇದು ಅತ್ಯಂತ ಕ್ರೂರ, ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇಂತಹ ಕ್ರಮಗಳಿಂದ ರೈತ ಚಳವಳಿಯನ್ನು ನಾಶ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಗಲಭೆ ಅದರಲ್ಲಿ ಭಾಗವಹಿಸಿರುವ ವ್ಯಕ್ತಿಗಳು ಯಾರು, ಅದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಸಮಗ್ರ ತನಿಖೆ ನಡೆಸಿ ಸತ್ಯಾಂಶವು ಹೊರಬೀಳಬೇಕಾಗಿದೆ. ಈ ಸಂಬಂಧ ರಾಷ್ಟ್ರದ ಗಣ್ಯರು ಒಂದು ಸತ್ಯಶೋಧನಾ ಸಮಿತಿ ರಚಿಸಿ  ಸತ್ಯಾಂಶವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಕೆಂಪು ಕೋಟೆ ಪ್ರವೇಶ ಮಾಡಿ ಧ್ವಜಾರೋಹಣ ಮಾಡುವ ಉದ್ದೇಶ ಚಳುವಳಿಗಾರರಲ್ಲಿ ಇದೆ ಎಂದು ಸುಪ್ರೀಂಕೋರ್ಟ್ ಮುಂದೆ ಕೇಂದ್ರದ ಅಟಾರ್ನಿ ಜನರಲ್ ಹೇಳಿದ್ದರು. ಈ ಮಾಹಿತಿ ಇದ್ದಲ್ಲಿ ಕೆಂಪುಕೋಟೆಗೆ ಸುರಕ್ಷಿತ ರಕ್ಷಣೆ ಮಾಡಿಲ್ಲವೇಕೆ? ಕೆಂಪುಕೋಟೆಗೆ ಪ್ರವೇಶ ಮಾಡಬೇಕಾದರೆ ನಾಲ್ಕು ಗೇಟ್ ಗಳನ್ನು ದಾಟಿ ಹೋಗಬೇಕಾಗುತ್ತದೆ. ಆದರೆ ಅದನ್ನು ತಡೆಗಟ್ಟಲು ತೀವ್ರ ಪ್ರಯತ್ನಗಳನ್ನು ಮಾಡಲಿಲ್ಲವೇಕೆ? ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಮುಂಚಿತವಾಗಿ ಕೆಲವು ದುಷ್ಕರ್ಮಿಗಳು ರೈತರ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವ ಸಾಧ್ಯತೆ ಇದೆ, ಇಂತಹವರ ಮೇಲೆ ಅನುಮಾನವಿದೆ ಎಂದು ಸ್ಥಳೀಯ ಪೊಲೀಸರಿಗೆ ತಿಳಿಸಿರುತ್ತಾರೆ. ಅಂತಹವರ ವಿರುದ್ಧ ಮುನ್ನೆಚ್ಚರಿಕಾ ಕ್ರಮವೇಕೆ ವಹಿಸಿಲ್ಲ ಎಂಬುದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸುವಂತೆ ಒತ್ತಾಯಿಸಿದರು.

ನವದೆಹಲಿಯಲ್ಲಿ ನಡೆದ ದುಷ್ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ದೇಶದಾದ್ಯಂತ ಜ.30ರಂದು(ನಾಳೆ) ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು ರಾಜ್ಯದಲ್ಲೂ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾಜಧಾನಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಸ್ವಾತಂತ್ರಯ ಉದ್ಯಾನವನದ ಬಳಿ ಹಾಗೂ ಮೈಸೂರಿನಲ್ಲಿ ಗಾಂಧಿ ಪ್ರತಿಮೆ ಮುಂದೆ ಎಲ್ಲಾ ಜನಪರ ಸಂಘಟನೆಗಳ ಪದಾಧಿಕಾರಿಗಳಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಗೌ.ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಉಪಾಧ್ಯಕ್ಷರುಗಳಾದ ಜಿ.ಟಿ.ರಾಮಸ್ವಾಮಿ, ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕೆಂಪೇಗೌಡ, ಹೊಸಕೋಟೆ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಟ ದೀಪ್ ಸಿಧು ಮತ್ತು ಕೆಲವು ಸಂಘಟನೆಗಳು ಉದ್ದೇಶಪೂರ್ವಕವಾಗಿಯೇ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಕಳಂಕ ತರುವ ಕೆಲಸವನ್ನು ಮಾಡಿದ್ದಾರೆ. ಪೊಲೀಸ್ ಬ್ಯಾರಿಕೇಡ್ ಕಿತ್ತೆಸೆದು ಕೆಂಪು ಪ್ರವೇಶ ಮಾಡುವವರೆಗೆ ಪೊಲೀಸರು ಏಕೆ ಸುಮ್ಮನಿದ್ದರು, ಪ್ರಧಾನಿ ಸೇರಿದಂತೆ ಇತರೆ ಗಣ್ಯರು ಆಗಮಿಸುವ ಸ್ಥಳಕ್ಕೆ ಹೆಚ್ಚಿನ ಭದ್ರತೆ ಏಕೆ ನೀಡಿರಲಿಲ್ಲ.

-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News