×
Ad

ಸಮಾಜ ಕಲ್ಯಾಣ ಸಚಿವ ರಾಮುಲು ನಿವಾಸಕ್ಕೆ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಮುತ್ತಿಗೆ

Update: 2021-01-30 17:12 IST

ಬೆಂಗಳೂರು, ಜ. 30: ಟೆಂಡರ್ ಇಲ್ಲದೆ ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಆರ್‍ಐಡಿಎಲ್)ಕ್ಕೆ 2ಕೋಟಿ ರೂ.ವರೆಗಿನ ಕಾಮಗಾರಿಗಳನ್ನು ನೇರವಾಗಿ ನೀಡಲು ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ಮೂಲಕ ಎಸ್ಸಿ-ಎಸ್ಟಿ ವರ್ಗಕ್ಕೆ ಗುತ್ತಿಗೆಯಲ್ಲಿ ಕಲ್ಪಿಸಿರುವ ಮೀಸಲಾತಿ ದುರ್ಬಲಗೊಳಿಸಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಗುತ್ತಿಗೆದಾರರು, ಸಚಿವ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ನಾಶಕ್ಕೆ ಸರಕಾರ ಹುನ್ನಾರ ನಡೆಸಿರುವುದು ದಲಿತ ವಿರೋಧಿ ತೀರ್ಮಾನ. ಇದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.

ಈ ವೇಳೆ ಮಾತನಾಡಿದ ಮಹದೇವಸ್ವಾಮಿ, ಕೆಆರ್‍ಐಡಿಎಲ್‍ಗೆ 2 ಕೋಟಿ ರೂ.ವರೆಗಿನ ಕಾಮಗಾರಿಗಳನ್ನು ನೀಡಬಾರದು ಎಂದು ಎಜಿ ಮತ್ತು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿದೆ. ಆದರೂ, ಸರಕಾರ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ ಕಲ್ಪಿಸಿರುವ ಗುತ್ತಿಗೆ ಮೀಸಲಾತಿ ಆದೇಶವನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ದೂರಿದರು.

ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಎಸ್ಸಿ-ಎಸ್ಟಿ ವರ್ಗಕ್ಕೆ ಗುತ್ತಿಗೆಯಲ್ಲಿ ಕಲ್ಪಿಸಿರುವ ಮೀಸಲಾತಿ ಆದೇಶವನ್ನು ದುರ್ಬಲಗೊಳಿಸಲು ಕೆಆರ್‍ಐಡಿಎಲ್ ಸಂಸ್ಥೆಗೆ 2 ಕೋಟಿ ರೂ.ಗಳ ವರೆಗಿನ ಕಾಮಗಾರಿಗಳನ್ನು ನೇರವಾಗಿ ನೀಡುವುದರಿಂದ ಇಡೀ ಪಾರದರ್ಶಕ ಕಾಯ್ದೆಯ ಮೂಲ ಉದ್ದೇಶಕ್ಕೆ ಭಂಗವಾಗುತ್ತದೆ. ಆದುದರಿಂದ ಸರಕಾರದ ಈ ನಿರ್ಧಾರವನ್ನು ಖಂಡಿಸಿ ದಲಿತ ಸಚಿವರು ರಾಜೀನಾಮೆ ನೀಡಬೇಕು ಎಂದು ಮಹದೇವಸ್ವಾಮಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News