×
Ad

ಕಾಂಗ್ರೆಸ್, ಜೆಡಿಎಸ್‍ನಲ್ಲಿ ಜೇಬು ತುಂಬಿದ್ದವರಿಗೆ ಮಾತ್ರ ಅಧಿಕಾರ: ಉಪ ಸಭಾಪತಿ ಎಂ.ಕೆ.ಪ್ರಾಣೇಶ್

Update: 2021-01-30 18:07 IST

ಚಿಕ್ಕಮಗಳೂರು, ಜ.30: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಜೇಬು ತುಂಬಿದ್ದವರಿಗೆ ಮಾತ್ರ ಅಧಿಕಾರ. ಆದರೆ ಬಿಜೆಪಿ ಪಕ್ಷದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಇಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಉನ್ನತ ಸ್ಥಾನ ಮಾನ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ನೂತನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಶನಿವರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ, ನಮ್ಮ ನಡವಳಿಕೆ ಶಾಶ್ವತವಾಗಿರುತ್ತದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇನೆ. ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸುವ ಕೆಲಸ ಮಾಡುತ್ತೇನೆ. ಇದೇ ಪಕ್ಷದೊಳಗೆ ಕಾರ್ಯಕರ್ತನಾಗಿ ಪಕ್ಷಕಟ್ಟುವ ಕೆಲಸವನ್ನೂ ಮಾಡುತ್ತೇನೆ. ಪಕ್ಷದ ಹೊರಗಡೆ ಪಕ್ಷಾತೀತವಾಗಿ ಜನರ ಸೇವೆ ಮಾಡುತ್ತೇನೆ ಎಂದರು.

ಕಾಶ್ಮೀರ ಉಳಿಸಿ ಹೋರಾಟದ ಪರ ಲಾಲ್‍ಚೌಕ್‍ನಲ್ಲಿ ನಡೆದ ಏಕತಾ ಯಾತ್ರೆ ಹೋರಾಟದಲ್ಲಿ ಭಾಗವಹಿಸಿದ್ದ ನನಗೆ ಅಧಿಕಾರದ ಅಪೇಕ್ಷೆ ಇರಲಿಲ್ಲ, ರಾಮಮಂದಿರ ಮತ್ತು ಹಿಂದೂ ವಿಚಾರಧಾರೆ ನಮ್ಮ ಉದ್ದೇಶವಾಗಿತ್ತು. ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷನಾಗಿ, ಆಟೋಚಾಲಕರ ಸಂಘದ ಗೌರವಾಧ್ಯಕ್ಷನಾಗಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷನಾಗಿ, ನನ್ನ ಕ್ಷೇತ್ರವಲ್ಲದಿದ್ದರು ಗೋಣಿಬೀಡು ಕ್ಷೇತ್ರದಿಂದ ಸ್ಪರ್ಧಿಸಿ ಜಿ.ಪಂ. ಸದಸ್ಯನಾಗಿ ಆಯ್ಕೆಯಾದೆ. ನಂತರ ಬಿಜೆಪಿ ಜಿಲ್ಲಾಧ್ಯಕ್ಷನಾಗಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿ ಕೆಲಸ ಮಾಡಿದ್ದೆ. ಈಗ ನಾನು ಉಪಸಭಾಪತಿ ಸ್ಥಾನದ ಮಟ್ಟಕ್ಕೆ ಬೆಳೆದಿದ್ದೇನೆ. ಇದಕ್ಕೆ ಪಕ್ಷ ಕಾರಣ. ಪಕ್ಷದಲ್ಲಿ ಕಾರ್ಯಕರ್ತರು ನಿಸ್ವಾರ್ಥದಿಂದ ದುಡಿದರೇ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು. 

ಪಕ್ಷದ ಕಾರ್ಯಕರ್ತರ ಶ್ರಮದ ಫಲದಿಂದ ಇಂದು ವಿಧಾನಪರಿಷತ್ ಉಪಸಭಾಪತಿ ಸ್ಥಾನ ಪಡೆದುಕೊಂಡಿದ್ದೇನೆ. ಆ ಸ್ಥಾನದ ಘನತೆಗೆ ಮತ್ತು ಪಕ್ಷಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದ ಅವರು, ನನಗಿಂತ ಹಿರಿಯರು ಸದನದಲ್ಲಿದ್ದರು. ಆದರೂ ನನ್ನ ರಾಜಕೀಯ ಅನುಭವ, ಸದನದಲ್ಲಿ ನಾನು ನಡೆದುಕೊಳ್ಳುತ್ತಿದ್ದ ರೀತಿ ಇದನ್ನೆಲ್ಲ ಗಮನಿಸಿ ಪಕ್ಷ ಪಕ್ಷ ತನಗೆ ಉಪಸಭಾಪತಿ ಸ್ಥಾನ ನೀಡಿದೆ ಎಂದ ಅವರು, ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವಾಗಿದೆ ಎಂದರು.

ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಗಣೇಶ್‍ರಾವ್ ಮಾತನಾಡಿದರು. ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ಪ್ರೇಮ್‍ಕುಮಾರ್, ರವೀಂದ್ರ ಬೆಳವಾಡಿ, ಮಧುರಾಜ್ ಅರಸ್, ದೀಪಕ್‍ದೊಡ್ಡಯ್ಯ, ಈಶ್ವರಹಳ್ಳಿ ಮಹೇಶ್, ಕೋಟೆ ರಂಗನಾಥ್, ನಿರಂಜನ್, ದೇವರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನಾ ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News