ರೈತ ಸಂಘಟನೆಗಳ ನಿರ್ಣಯ: ರೈತ ವಿರೋಧಿ ಕಾಯ್ದೆ ಹಿಂಪಡೆಯುವರೆಗೂ ಹೋರಾಟ
ಬೆಂಗಳೂರು, ಜ.30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನವಾದ ಶನಿವಾರ ಉಪವಾಸ ಸತ್ಯಾಗ್ರಹ ನಡೆಸಿದ ರೈತ ಮುಖಂಡರು, ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯುವರೆಗೂ ಹೋರಾಟ ಮುಂದುವರೆಸಲಾಗುವುದೆಂದು ನಿರ್ಣಯ ಕೈಗೊಂಡರು.
ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನದಂದು ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಕರಾಳ ದಿನಾಚರಣೆಯಲ್ಲಿ ಕೃಷಿ ತಜ್ಞರು, ಪ್ರಗತಿಪರ ಹೋರಾಟಗಾರರು, ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಬಳಿಕ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನಿರ್ಣಯ ಮಂಡಿಸಿದ ರೈತ ನಾಯಕರು, ಕೇಂದ್ರ ಸರಕಾರ ಈ ಕೂಡಲೇ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಜತೆಗೆ, ಕನಿಷ್ಠ ಬೆಂಬಲ ಬೆಲೆಯ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯ ಮಾಡಿದರು.
ಇನ್ನು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಹೋರಾಟ ಸಂದರ್ಭದಲ್ಲಿ ರೈತ ನಾಯಕರನ್ನು ಗುರಿಯಾಗಿಸಿಕೊಂಡು ದಾಖಲು ಮಾಡಿರುವ ದೇಶದ್ರೋಹ ಪ್ರಕರಣಗಳನ್ನು ವಜಾಗೊಳಿಸಬೇಕು. ಅದೇ ರೀತಿ, ಜ.26ರಂದು ನಡೆದ ಗಲಭೆ ಪ್ರಕರಣವನ್ನು ನಿಪ್ಪಕ್ಷಪಾತ ತನಿಖೆ ಒಳಪಡಿಸಬೇಕು. ರೈತ ಮುಖಂಡ ಟಿಕಾಯತ್ ಅವರ ಮೇಲೆ ನಡೆದಿರುವ ದಾಳಿ ಸಂಬಂಧ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಯಿತು.
ಇದಕ್ಕೂ ಮೊದಲು ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರು 12 ಗಂಟೆಗೆ ಮೌನಾಚರಣೆ ನಡೆಸುವಂತೆ ಕರೆ ನೀಡಿದ್ದಾರೆ. ಅದು ಹೊಸದಲ್ಲ. ನೆಹರೂ ಈ ಮೊದಲೇ ಕರೆ ಕೊಟ್ಟಿದ್ದರು. ಅಲ್ಲದೆ, ರೈತ ವಿರೋಧಿಯಾಗಿರುವ ಪ್ರಧಾನಿ ಮೋದಿಗೆ ಈ ದಿನ ಗಾಂಧಿ ಹೆಸರಲ್ಲಿ ಮೌನಾಚರಣೆ ಮಾಡುವ ನೈತಿಕತೆ ಇಲ್ಲ. ಅವರೇನಿದ್ದರೂ ಗೋಡ್ಸೆ ದಿನ ಆಚರಿಸಬಹುದು ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ರೈತರು ಆರಂಭದಿಂದಲೂ ಶಾಂತಿ ಕಾಯ್ದುಕೊಂಡಿದ್ದಾರೆ. ಆದರೆ ಜನವರಿ 26 ರಂದು ನಡೆದ ಗಲಭೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೆ ಕಾರಣ ಎಂದು ಆರೋಪಿಸಿದ ಅವರು, 541 ಸಂಘಟನೆಗಳು ಕೃಷಿ ಮಸೂದೆಗಳ ವಿರುದ್ದ ಹೋರಾಡಲು ಸಂಯುಕ್ತ ಕಿಸಾನ್ ಮೋರ್ಚಾ ರಚನೆಯಾಗಿದೆ. ರಾಜ್ಯದಲ್ಲೂ ನಾವು 48 ಸಂಘಟನೆಗಳು ಅದರ ಭಾಗವಾಗಿದ್ದೇವೆ ಎಂದರು.
ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರು ನಡೆಸಿದ ಹೋರಾಟ ಪ್ರಾಮಾಣಿಕವಾಗಿದೆ. ರೈತರು ಸಾವಿಗೆ ಹೆದರುವವರಲ್ಲ, ಗುಂಡಿಗೆ ಹೆದರುವವರಲ್ಲ. ಅಲ್ಲದೆ, ಬಿಜೆಪಿಯ ಗೂಂಡಾಗಳು ರೈತರ ಮೇಲೆ ಕಲ್ಲು ಹೊಡೆದರು, ರೈತರಿಗೆ ಇದು ಯಾವುದೂ ಗೊತ್ತಿಲ್ಲ. ಬಿಜೆಪಿಯವರಿಗೆ ಅಧಿಕಾರ ಪಡೆಯಲು, ಉಳಿಸಿಕೊಳ್ಳಲು ತಂತ್ರ-ಕುತಂತ್ರ ಕರಗತವಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ವಿನಾಶ್ ಅದು. ಜನರನ್ನು ದಾರಿ ತಪ್ಪಿಸಿ ಹಾಳು ಮಾಡುತ್ತಿದ್ದು, ಜಿಡಿಪಿ ನೆಲಕಚ್ಚಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತ ಮುಖಂಡ ಚಾಮರಸ ಮಾಲಿ ಪಾಟೀಲ್, ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಎಚ್.ವಿ.ವಾಸು, ಕಾರ್ಮಿಕ ಮುಖಂಡ ಜಿ.ಎನ್.ನಾಗರಾಜ್, ಚಿಂತಕಿ ವಿಮಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿಗಾರ್ತಿ ನಡೆಗೆ ಖಂಡನೆ; ಮೀಡಿಯಾ ವಿರುದ್ಧ ಘೋಷಣೆ
ಉಪವಾಸ ಸತ್ಯಾಗ್ರಹದಲ್ಲಿ ಸಭಿಕರನ್ನುದ್ದೇಶಿಸಿ ರೈತ ಮುಖಂಡರೊಬ್ಬರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರ್ತಿ, ನೇರ ಸಂದರ್ಶನ ಎಂದು ಹೇಳಿಕೊಂಡು, ವೇದಿಕೆಯಲ್ಲಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಮಾತನಾಡಿಸಲು ಮುಂದಾದ ವೇಳೆ, ಸ್ಥಳದಲ್ಲಿದ್ದ ಹೋರಾಟಗಾರರು ಇದನ್ನು ಖಂಡಿಸಿದರು.
ಅಷ್ಟೇ ಅಲ್ಲದೆ, ಓರ್ವ ಹಿರಿಯ ಮುಖಂಡರು ಮಾತನಾಡುವ ಸಂದರ್ಭವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಮಧ್ಯಪ್ರವೇಶ ಮಾಡಲಾಗಿದೆ ಎಂದು ಹಲವು ಹೋರಾಟಗಾರರು ವರದಿಗಾರ್ತಿ ಮೇಲೆ ಮುಗಿಬಿದ್ದ ಪ್ರಸಂಗ ಜರುಗಿತು. ಈ ನಡುವೆ ಮತ್ತೊಂದು ಗುಂಪು, ಆಕೆಯನ್ನು ಹೊರಹಾಕಿ ಎಂದಿದ್ದು ಮಾತ್ರವಲ್ಲದೆ, ಗೋಧಿ ಮೀಡಿಯಾ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.