ಶಾಸಕರನ್ನು ದೂರವಿಟ್ಟ ನೂತನ ಸಚಿವ: ಆರೋಪ
ಬೆಂಗಳೂರು, ಜ.30: ಸರಕಾರದ ಅಧಿಕೃತ ಕಾರ್ಯಕ್ರಮ ಎನ್ನಲಾದ ಕಾಮಗಾರಿಗಳ ಉದ್ಘಾಟನೆ ವೇಳೆ ಶಾಸಕ ಶರತ್ ಬಚ್ಚೇಗೌಡ ಅವರನ್ನು ಉದ್ದೇಶಪೂರ್ವಕವಾಗಿಯೇ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಆರೋಪಿಸಿ ನೂತನ ಸಚಿವ ಎಂಟಿಬಿ ನಾಗರಾಜು ಹಾಗೂ ಶಾಸಕರ ಬೆಂಬಲಿಗರ ನಡುವೆ ಗಲಾಟೆ ನಡೆಯಿತು.
ಶನಿವಾರ ಹೊಸಕೋಟೆ ನಗರದ 7ನೆ ವಾರ್ಡ್‍ನ ಗೌತಮ್ ಕಾಲನಿಯಲಿ ಸಚಿವ ಎಂಟಿಬಿ ನಾಗರಾಜ್ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಶಾಸಕರನ್ನು ಆಹ್ವಾನಿಸಿಲ್ಲ ಎಂದು ಶರತ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಸಚಿವರ ವಿರುದ್ಧ ಘೋಷಣೆ ಕೂಗಿದರು.
ಇದರ ಬೆನ್ನಲ್ಲೇ, ಸಚಿವರ ಬೆಂಬಲಿಗರು, ಶಾಸಕರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೆರಳಿದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈಮಿಲಾಯಿಸುವ ಹಂತ ತಲುಪಿತು.
ಈ ನಡುವೆ ಸ್ಥಳದಲ್ಲಿದ್ದ ಪೊಲೀಸರು, ಶರತ್ ಬಚ್ಚೇಗೌಡ ಅವರ ಬೆಂಬಲಿಗರು ಎನ್ನಲಾದ ಹಲವರ ಮೇಲೆ ಲಾಠಿ ಬೀಸಿದರು. ಇದರ ಪರಿಣಾಮ ಹಲವರು ಗಾಯಗೊಂಡರು ಎಂದು ತಿಳಿದುಬಂದಿದೆ.
ಪ್ರತಿಭಟನೆ: ಶಾಸಕರ ಬೆಂಬಲಿಗರ ಮೇಲೆ ಸಚಿವರ ಕಡೆಯವರೇ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿ ಹಲವರು ಇಲ್ಲಿನ ಹೊಸಕೋಟೆ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ, ಪ್ರತಿಭಟನೆ ನಡೆಸಿದರು.