ಜಾನುವಾರು ಸಾಗಾಟ ವಾಹನ ಚಾಲಕನಿಗೆ ಹಲ್ಲೆ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಹಾರ ಹಾಕಿ ಸ್ವಾಗತ!
ಚಿಕ್ಕಮಗಳೂರು, ಜ.30: ಶೃಂಗೇರಿ ತಾಲೂಕಿನಲ್ಲಿ ಜಾನುವಾರು ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರ ಪೈಕಿ ನಾಲ್ವರಿಗೆ ಶನಿವಾರ ಜಾಮೀನು ಸಿಕ್ಕಿದ್ದು, ಜೈಲಿನಿಂದ ಹೊರ ಬಂದವರನ್ನು ಸಂಘಪರಿವಾರದ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ ಬರ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕಳೆದ 20 ದಿನಗಳ ಹಿಂದೆ ರಾಣೆಬೆನ್ನೂರಿನಿಂದ ಮಂಗಳೂರಿಗೆ ಎರಡು ಕ್ಯಾಂಟರ್ ವಾಹನಗಳಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಶೃಂಗೇರಿ ತಾಲೂಕಿನ ತನಿಕೋಡು ಚೆಕ್‍ಪೋಸ್ಟ್ ಹಾಗೂ ಆಗುಂಬೆ ಮಾರ್ಗದ ಕೈಮನೆ ಎಂಬಲ್ಲಿ ಜಾನುವಾರುಗಳಿದ್ದ ವಾಹನಗಳನ್ನು ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ತಡೆದಿದ್ದರು. ಕೈಮನೆ ಗ್ರಾಮದಲ್ಲಿ ಕಾರ್ಯಕರ್ತರ ಕೈಗೆ ಸಿಕ್ಕ ವಾಹನ ಚಾಲಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಈ ಘಟನೆ ಸಂಬಂದ ಕ್ಯಾಂಟರ್ ಚಾಲಕ ನೀಡಿದ ದೂರಿನ ಮೇರೆಗೆ ಶೃಂಗೇರಿ ಪೊಲೀಸರು ಜಾನುವಾರು ಸಾಗಾಟ ಮಾಡಿದವರು ಹಾಗೂ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಶನಿವಾರ ಬಂಧನಕ್ಕೊಳಗಾದವರ ಪೈಕಿ ನಾಲ್ವರು ಸಂಘಪರಿವಾರದ ಕಾರ್ಯಕರ್ತರಿಗೆ ಜಾಮೀನು ದೊರಕಿದ್ದು, ನಗರದ ರಾಮನಗಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದಿಂದ ಆರೋಪಿಗಳು ಹೊರಬರುತ್ತಿದ್ದಂತೆ ಜೈಲಿನ ಎದುರು ಜಮಾಯಿಸಿದ್ದ ಬಜರಂಗದಳ, ವಿಶ್ವಹಿಂದೂ ಪರಿಷತ್ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೂವಿನ ಹಾರ ಹಾಕಿ ಭವ್ಯ ಸ್ವಾಗತ ನೀಡಿದರು. ಅಲ್ಲದೇ ಜೈಲಿನ ಆವಣದಲ್ಲೇ ಆರೋಪಿಗಳ ಪರ ಜೈಕಾರ ಹಾಕಿ, ಜೈಶ್ರೀರಾಮ್ ಘೋಷಣೆ ಕೂಗಿದರು.