×
Ad

ಗೋ ಶಾಲೆಗಳ ತೆರೆಯಲು ಪ್ರತೀ ತಾಲೂಕಿನಲ್ಲಿ ಗೋಮಾಳ ಜಾಗ ಗುರುತಿಸಿ: ಸಚಿವ ಪ್ರಭು ಚೌಹಾಣ್ ಸೂಚನೆ

Update: 2021-01-30 22:31 IST

ಚಿಕ್ಕಮಗಳೂರು, ಜ.30: ಗೋಶಾಲೆ ತೆರೆಯಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಪ್ರತೀ ತಾಲೂಕಿನಲ್ಲಿ ಗೋಮಾಳಕ್ಕೆ ಜಾಗ ಗುರುತಿಸಬೇಕು. ಜಾನುವಾರು ಹತ್ಯೆ ನಿಷೇದ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಕಸಾಯಿಖಾನೆಗೆ ಜಾನುವಾರು ಸಾಗಿಸುವುದನ್ನು ತಡೆಯಲು ಪ್ರತೀ ತಾಲೂಕಿನಲ್ಲಿ 2 ಗೋಶಾಲೆಗಳನ್ನು ತೆರೆಯಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಗೋಹತ್ಯೆ ನಿಷೇದ ಕಾಯ್ದೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧಕಾಯ್ದೆ ಅನುಷ್ಠಾನಗೊಂಡಲ್ಲಿ ಪಶುವೈದ್ಯರಿಗೆ ಹೆಚ್ಚು ಕೆಲಸಗಳಿರುತ್ತವೆ. ರಾಜ್ಯದಲ್ಲಿ ಶೇ.50 ಹುದ್ದೆಗಳು ಖಾಲಿ ಇದ್ದು, 600 ಪಶುವೈದ್ಯರ ಹುದ್ದೆಗಳನ್ನು ಭರ್ತಿಗೆ ಕ್ರಮವಹಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಹಾಗಾಗಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟು 30 ಪಶು ಆ್ಯಂಬುಲೆನ್ಸ್ ನೀಡಲು ಗುರಿ ಹೊಂದಿದ್ದು, ಈಗಾಗಲೇ 15 ಆ್ಯಂಬುಲೆನ್ಸ್ ಬೇರೆ ಜಿಲ್ಲೆಗಳಿಗೆ ವಿತರಿಸಲಾಗಿದೆ. ಕೂಡಲೇ ಪ್ರಸ್ತಾವ ಸಲ್ಲಿಸಿದರೆ ಈ ಜಿಲ್ಲೆಗೆ ಪಶು ಆ್ಯಂಬುಲೆನ್ಸ್ ನೀಡುತ್ತಿದ್ದು, ಕೂಡಲೇ ಗಮನಹರಿಸಬೇಕೆಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಜಾನುವಾರುಗಳ ಮೇವು ಸಂಗ್ರಹಿಸಲು ಅನುಕೂಲವಾಗುವಂತೆ ಜಿಲ್ಲೆಗೆ ಸೈಲೋ ನೀಡಬೇಕೆಂದು ಸಹಾಯಕ ನಿರ್ದೇಶಕರೊಬ್ಬರು ಮನವಿ ಮಾಡಿದಾಗ, ಈ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದ ಸಚಿವರು, ಜಿಲ್ಲೆಯಲ್ಲಿ ಜಾಗ ನೀಡಿದರೆ ಗೋಸದನ ಮಂಜೂರು ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ಮಾತನಾಡಿದ ಕಡೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು, ಕಡೂರು ಪಟ್ಟಣದಿಂದ ಸ್ವಲ್ಪ ದೂರದಲ್ಲಿ 11 ಎಕರೆ ಜಾಗ ಗುರುತಿಸಲಾಗಿದ್ದು, ಅಲ್ಲಿ ಗೋಸದನಕೇಂದ್ರ ನಿರ್ಮಾಣ ಮಾಡಲು ಸಾಧ್ಯವೆಂದು ಸಲಹೆ ನೀಡಿದರು.

ಪಶುಸಂಗೋಪನೆಯಲ್ಲಿ ಉತ್ತಮ ರೀತಿ ಕಾರ್ಯನಿರ್ವಹಣೆಯಲ್ಲಿ ರಾಜ್ಯದಲ್ಲಿಯೇ ಚಿಕ್ಕಮಗಳೂರು ಜಿಲ್ಲೆ 6ನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದ ಉಪನಿರ್ದೇಶಕ ಡಾ.ಪ್ರಕಾಶ್, 1 ಪಾಲಿಕ್ಲಿನಿಕ್, 25 ಪಶು ಆಸ್ಪತ್ರೆ, 71 ಪಶುಚಿಕಿತ್ಸಾಲಯ, 39 ಪ್ರಾಥಮಿಕ ಪಶುಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 79,836 ಮಿಶ್ರತಳಿಯ ದನಗಳು, 2,57,740 ಸ್ಥಳೀಯ ದನಗಳು, 70,870 ಎಮ್ಮೆಗಳು, 91,312 ಕುರಿಗಳು, 46068 ಮೇಕೆಗಳು, 2158 ಹಂದಿಗಳು, 42,577 ಶ್ವಾನಗಳು ಇವೆ. ಕಾಲುಬಾಯಿಜ್ವರಕ್ಕೆ ಲಸಿಕೆ ಹಾಕುವುದರಲ್ಲಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಶೇ.98ರಷ್ಟು ಪ್ರಗತಿಯಾಗಿದ್ದರೆ, ತರೀಕೆರೆ ಶೇ.87,ಕಡೂರು ನ.ರಾ.ಪುರದಲ್ಲಿ ಶೇ.91,ಕೊಪ್ಪದಲ್ಲಿ ಶೇ.91 ರಷ್ಟು ಪ್ರಗತಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 32 ಜಾನುವಾರು ಆರೋಗ್ಯ ಶಿಬಿರ ನಡೆಸಲು ಗುರಿಹೊಂದಿದ್ದು, 28 ಶಿಬಿರಗಳು ನಡೆದಿವೆ. 4 ಬಾಕಿ ಇವೆ. ಈ ಶಿಬಿರದಲ್ಲಿ ಗೊಡ್ಡುರಾಸುಗಳು ಗರ್ಭಧರಿಸುವಂತೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಉಪನಿರ್ದೇಶಕರು ಹೇಳಿದರು. ಜಿಲ್ಲೆಯ 4 ಸ್ಥಳಗಳಲ್ಲಿ ಪಶುಆಸ್ಪತ್ರೆಗಳು ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ತಿಳಿಸಿದಾಗ ಹೊಸಕಟ್ಟಡಗಳು ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸಚಿವರು ಹೇಳಿದರು.

ಗೋಹತ್ಯೆ ನಿಷೇಧಕಾಯ್ದೆ ಕಾನೂನುಗಳನ್ನು ಆಡು ಭಾಷೆಯಲ್ಲಿ ಸ್ಥಳೀಯ ಕಚೇರಿಗಳಲ್ಲಿ ಭಿತ್ತಿಪತ್ರದ ಮೂಲಕ ರೈತರುಗಳಿಗೆ ಮನವರಿಕೆ ಮಾಡಿಕೊಡುವ ಕೆಲಸಕ್ಕೆ ಮುಂದಾಗುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಅಕ್ಷಯ್ ಸಲಹೆ ನೀಡಿದರು.

ಅಮೃತ್ ಮಹಲ್ ತಳಿ ಸಂವಿರ್ಧನಾ ಕೇಂದ್ರವನ್ನು ನಿರ್ವಹಣೆಯನ್ನು  ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡಿಸಬೇಕೆಂದು ದೀಪಕ್‍ ದೊಡ್ಡಯ್ಯ ಇದೇ ವೇಳೆ ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಪಶುಸಂಗೋಪಲನಾ ಇಲಾಖೆಯ ವಿವಿಧ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಚಿಕಿತ್ಸೆಗೆ ಸ್ಪಂದಿಸದ ಜಾನುವಾರುಗಳು, ಗಂಡುಕರುಗಳನ್ನು ಏನು ಮಾಡಬೇಕೆಂದು ರೈತರು ಪ್ರಶ್ನಿಸುತ್ತಿದ್ದಾರೆ. ಗಂಡುಕರುಗಳನ್ನು ನಿಮ್ಮ ಕಚೇರಿಗೆ ತಂದು ಬಿಡುತ್ತೇವೆಂದು ರೈತರು ಹೇಳುತ್ತಿದ್ದಾರೆಂದು ಸಚಿವರಿಗೆ ಅಧಿಕಾರಿಗಳು ಹೇಳಿದಾಗ, ಗಂಡು ಕರುಗಳನ್ನು ಮೂರು ತಿಂಗಳು ಸಾಕಿದ ನಂತರ ಗೋಶಾಲೆಗೆ ತಂದು ಬಿಡುವಂತೆ ರೈತರ ಮನವೊಲಿಸಬೇಕೆಂದು ಸಚಿವ ಚೌಹಾಣ್ ಸಲಹೆ ನೀಡಿದರು.

ಮೂಡಿಗೆರೆ ಮತ್ತು ಶೃಂಗೇರಿ ತಾಲೂಕಿನಲ್ಲಿ ಪಶುವೈದ್ಯರು ಗ್ರಾಮಗಳಿಗೆ ತೆರಳುತ್ತಿಲ್ಲ, ದೂರವಾಣಿ ಕೆರೆ ಮಾಡಿದರೆ ಸ್ವಿಚ್‍ಆಫ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೂರು ಬರಬಾರದು ಒಂದು ವೇಳೆ ದೂರುಗಳು ಬಂದರೆ ಸೂಕ್ತಕ್ರಮ ಕೈಗೊಳ್ಳಬೇಕಾಗುತ್ತದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಜಾನುವಾರುಗಳನ್ನು ಕರೆದುಕೊಂಡು ಬಂದರೆ ಔಷಧಿ ತರಲು ಚೀಟಿ ಬರೆದು ಕೊಡಲಾಗುತ್ತಿದ್ದು, ಇದು ತಪ್ಪಬೇಕು. ಔಷಧಗಳಿಗೆ ಯಾವುದೇ ಕೊರತೆ ಇಲ್ಲ.
- ಪ್ರಭು ಚೌಹಾಣ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News