ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ: ಅಸದುದ್ದೀನ್ ಉವೈಸಿ

Update: 2021-01-30 18:47 GMT

ಕಲಬುರಗಿ: ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯಾಗಿದ್ದು, ಇಂದು ದೆಹಲಿಯಲ್ಲಿ ರೈತರನ್ನು ಕೊಲ್ಲಲು ಗೋಡ್ಸೆ ಅನುಯಾಯಿಗಳು ಸಂಚು ನಡೆಸುತ್ತಿದ್ದಾರೆ. ಈ  ದೇಶ ಗೋಡ್ಸೆ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಇಂದು ನಗರದ ಮೋಘಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮನ ಹೆಸರಲ್ಲಿ ದೇಶದಲ್ಲಿ ದ್ವೇಷ ಹರಡಿಸುವ ಕೆಲಸ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ನವರು ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಹೇಳುತ್ತಿದ್ದರು, ಆದರೆ ಕರ್ನಾಟಕದಲ್ಲಿ  ಪಕ್ಷ ಬಿಟ್ಟು ಹೋದ ಕಾಂಗ್ರೆಸ್ ಶಾಸಕರು ನನಗೆ ಹೇಳಿ ಹೋಗಿದ್ದಾರಾ ಎಂದು ಪ್ರಶ್ನಿಸಿದ ಉವೈಸಿ, ಕುಮಾರಸ್ವಾಮಿ ಕೂಡ ರಾಜಕೀಯ ಲಾಭಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಪಕ್ಷದಲ್ಲಿ ಅಧಿಕಾರಕ್ಕೆ ಆಸೆ ಪಡುವವರು ಬೇಕಾಗಿಲ್ಲ, ಮುಸ್ಲಿಂ ಹಾಗೂ ದಲಿತರಿಗಾಗಿ ಹೋರಾಡುವ ನಾಯಕರು ಬೇಕು. ಸಮುದಾಯದ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಮುಂದಿನ ಚುನಾವಣೆಯಲ್ಲಿ ಬೀದರ್, ಕಲಬುರಗಿಯಲ್ಲಿ ಪಕ್ಷದಿಂದ ಅಭ್ಯರ್ಥಿಯಾಗಿ ಇಳಿಸಲಾಗುವುದು ಅದಕ್ಕಾಗಿ ಇಂದಿನಿಂದ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಕುಸಿದಿದ್ದು, ಅದು ಮೂಲೆ ಗುಂಪಾಗಿದೆ. ಅವರಿಂದ ಏನೂ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಉವೈಸಿಯನ್ನು ಮಾತ್ರ ವಿರೋಧಿಯಾಗಿ ನೋಡುತ್ತಿದ್ದಾರೆ. ಅವರ ಈ ಎಡಬಿಡಂಗಿ ಹೇಳಿಕೆಗೆ ನಾವು ಬೆಲೆಕೊಡಲ್ಲ. ಪಕ್ಷಕ್ಕೆ ಬಿಹಾರದಲ್ಲಿ ಸಿಕ್ಕಿರುವ ಬೆಂಬಲ ಕರ್ನಾಟಕದಲ್ಲಿ ಕೂಡ ಸಿಗಲಿದೆ ಎಂದರು.

ದಿವಂಗತ ಖಮರುಲ್ ಇಸ್ಲಾಂ ಅವರು ಕಲಬುರಗಿ ಜನರಿಗೆ ನೀಡಿರುವ ಸೇವೆ ಅವಿಸ್ಮರಣಿಯ, ಮುದೊಂದು ದಿನ ಅವರ ಸ್ಥಾನವನ್ನು ತುಂಬಲು ಹೊಸ ನಾಯಕ ಹುಟ್ಟುತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಹತ್ಯೆ ಕುರಿತು ಮತನಾಡಿದ ಅವರು ಗೋಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕತೆಯಿಂದ ಕೂಡಿದೆ, ಇದರಿಂದ ಪಶು ಪಾಲನೆ ನಡೆಸುವ ಮುಸ್ಲಿಮರು ಸೇರಿ ಬಹುತೇಕರಿಗೆ ತೊಂದರೆ ಆಗಲಿದೆ. ಕಾಯ್ದೆಯ ಹೆಸರಲ್ಲಿ ಜೈಲಿಗೆ ತಳ್ಳಬಹುದು, ಮನೆಗಳನ್ನು ಮಾರಾಟ ಮಾಡಿ ಬೀದಿಗೆ ತಂದು ನಿಲ್ಲಿಸುವ ಅವೈಜ್ಞಾನಿಕ ಕಾಯ್ದೆ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ 8.35 ಕೋಟಿ ಜನರು ಮಾಂಸಾಹಾರಿಗಳಾಗಿದ್ದಾರೆ. ಆಹಾರ ಪದಾರ್ಥಗಳಾದ ತೊಗರಿ, ಕಡ್ಲೆ, ಹೆಸರು ಸೇರಿದಂತೆ ಇತ್ಯಾದಿ ಬೇಳೆಕಾಳುಗಳ ಬೆಲೆ ಗಗನಕ್ಕೆ ಏರಿದ್ದು, ಜನರಿಗೆ ಕಡಿಮೆ ಬೆಲೆಯಲ್ಲಿ ಪೌಷ್ಠಿಕಾಂಶ ಉಳ್ಳ ಆಹಾರ ಸೇವಿಸುವುದು ಬಿಜೆಪಿಗೆ ಇಷ್ಟವಿಲ್ಲ. ಕೊರೋನ ಹೆಸರಲ್ಲಿ ಅವೈಜ್ಞಾನಿಕ ಲಾಕ್ ಡೌನ್ ನಿಂದ ಜನರು ಸಂಕಷ್ಟದಲ್ಲಿ ಇದ್ದಾರೆ. ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಸರಕಾರದ ತಪ್ಪು ನೀತಿಯಿಂದ ದೇಶ ಹಸಿವಿನಿಂದ ನರಳುವಂತಾಗಿದೆ ಎಂದರು.

ಜಿಲ್ಲಾಧ್ಯಕ್ಷ ರಹೀಂ ಮಿರ್ಚಿ, ಮಾಜಿ‌ ಜಿ.ಪಂ ಸದಸ್ಯ ಗುರುಶಾಂತ ಪಟ್ಟೇದ್ದಾರ್, ಇಲ್ಯಾಸ್ ಸೇಠ್, ಹಿರಿಯ ಪತ್ರಕರ್ತ ಅಝಿಝುಲ್ಲಾ ಸರ್ಮಸ್ತ್, ಮಾಜಿದ್ ಪ್ಯಾರೆ, ಮೌಲಾನಾ ವಾಜೀದ್, ಪಕ್ಷದ ರಾಜ್ಯ ಅಧ್ಯಕ್ಷ ಉಸ್ಮಾನ ಗನಿ, ಹಬೀಬ್ ಪಟೇಲ್, ಶಿರಾಜ್ ಪಟೇಲ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News