ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಲು ನಳಿನ್ ಕುಮಾರ್ ಕುಮ್ಮಕ್ಕು: ಧ್ರುವನಾರಾಯಣ ಆರೋಪ

Update: 2021-01-31 07:48 GMT

ಮೈಸೂರು, ಜ.31: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂದು ನಳಿನ್ ಕುಮಾರ್  ಮತ್ತವರ ಬೆಂಬಲಿಗರು ಕುಮ್ಮುಕ್ಕು ನೀಡುತ್ತಿದ್ದಾರೆ. ಹಾಗಾಗಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಕಾರ ಮತ್ತು ಯಡಿಯೂರಪ್ಪರ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ತಮ್ಮ ಪಕ್ಷದ ಮುಖ್ಯಮಂತ್ರಿ ವಿರುದ್ಧ ಯಾರೇ ಮಾತನಾಡಿದರು ಪಕ್ಷದ ಅಧ್ಯಕ್ಷರಾದವರು ಶಿಸ್ತು ಕ್ರಮ ಜರುಗಿಸಬೇಕು. ಆದರೆ, ಬಿಜೆಪಿ ಪಕ್ಷದ ಶಾಸಕರುಗಳಾದ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಿರಂತರವಾಗಿ ಹೇಳಿಕೆ ನೀಡುತ್ತಿದ್ದಾರೆ. ಹಾಗಿದ್ದ ಮೇಲೆ ಏಕೆ ಇವರ ಮೇಲೆ ಕ್ರಮ ಜರುಗಿಸುತ್ತಿಲ್ಲ ಎಂದು ಧ್ರುವನಾರಾಯಣ ಪ್ರಶ್ನಿಸಿದರು.

ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲ‌ ಮತ್ತು ಸಾಮರಸ್ಯ ಇಲ್ಲ. ಹಾಗಾಗಿಯೇ ವಿರೋಧ ಪಕ್ಷದವರು ಹೇಳಿಕೆ ನೀಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ನಳಿನ್ ಗಿಲ್ಲ  

ನಳಿನ್ ಕುಮಾರ್ ಕಟೀಲು ಅವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು   ಆರ್.ಧ್ರುವನಾರಾಯಣ ಕಿಡಿಕಾರಿದ್ದಾರೆ.

ಇತ್ತೀಚೆಗೆ ನಳಿನ್ ಕುಮಾರ್ ಚಾಮರಾಜನಗರದಲ್ಲಿ ಸಭೆಯೊಂದರಲ್ಲಿ ಮಾತನಾಡುವ ವೇಳೆ ಖರ್ಗೆ ಅವರನ್ನು ಸೋಲಿಸಿದೆವು, ಸಿದ್ದರಾಮಯ್ಯರನ್ನು ಊರು ಬಿಡಿಸಿದೆವು. ಇನ್ನು ಡಿ.ಕೆ.ಶಿವಕುಮಾರ್ ರನ್ನು ಸೋಲಿಸುತ್ತೇವೆ ಎಂಬ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ. ಕಟೀಲು ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.

ಓರ್ವ ಜವಾಬ್ದಾರಿಯುತ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಓರ್ವ ಪೆದ್ದನ ರೀತಿ ಮಾತನಾಡುತ್ತಿದ್ದಾರೆ. ಖರ್ಗೆ ಅವರೆಲ್ಲಿ, ನಳಿನ್  ಎಲ್ಲಿ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಐದು ವರ್ಷ ನಡೆದುಕೊಂಡ ರೀತಿಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕರಾದವರು ಖರ್ಗೆ ನೋಡಿ ಕಲಿಯಬೇಕು ಎಂದಿದ್ದಾರೆ. ಅಂತಹದರಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ಪೆದ್ದರು ನೀಡುವ ಹೇಳಿಕೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷ ಕಟ್ಟುವುದೇ ನನ್ನ ಗುರಿ: ರಾಜ್ಯ ರಾಜಕಾರಣಕ್ಕೆ ಬರುತ್ತೀರ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಸದ್ಯದ ಪರಿಸ್ಥಿತಿಯಲ್ಲಿ ಈ ಹೇಳಿಕೆ ಅಪ್ರಸ್ತುತ, ಇನ್ನೂ ಎರಡುವರೆ ವರ್ಷ ಸಮಯ ಇದೆ ಎಂದರು.

ನನಗೆ ಕಾಂಗ್ರೆಸ್ ಪಕ್ಷ ಜೀವ ನೀಡಿದೆ. ನಾನು ಎರಡು ಬಾರಿ ಶಾಸಕನಾಗಿ, ಎರಡು ಬಾರಿ ಸಂಸತ್ ಸದಸ್ಯನಾಗಿ ಕರ್ತವ್ಯನಿರ್ವಹಿಸಿದ್ದೇನೆ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ, ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರಬೇಕು ಎಂಬುದೇ ನನ್ನ ಗುರಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಎಸ್.ಸಿ.ಬಸವರಾಜು, ಎಚ್.ಎ.ವೆಂಕಟೇಶ್, ಸೀತಾರಾಮ್, ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News