ಮಹಾದಾಯಿ ನೀರು ಹಂಚಿಕೆ ವಿವಾದ: ಗೋವಾ ಸಿಎಂ ಸಾವಂತ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

Update: 2021-01-31 12:38 GMT

ಬೆಂಗಳೂರು, ಜ.31: ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಇರುವ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಆದರೆ, ಈ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಸಾವಂತ್ ಅವರ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನೀರು ನಮಗೆ ಸಿಗಲೇಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಷ್ಟೇ ಅಲ್ಲದೆ, ಈ ವಿಚಾರವಾಗಿ ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿಕೊಡಲಾಗುವುದು. ಇನ್ನು, ನ್ಯಾಯಾಲಯದಲ್ಲೂ ತೀರ್ಪು ರಾಜ್ಯಕ್ಕೆ ಅನುಕೂಲಕರವಾಗಿಯೇ ಇದೆ ಎಂದರು.

ಮಹಾದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಅವರ ಹೇಳಿಕೆ ಸರಿಯಲ್ಲ. ಗೋವಾ ಮುಖ್ಯಮಂತ್ರಿಗಳು ಅವರ ಸ್ವಾರ್ಥಕ್ಕಾಗಿ ಮಾತನಾಡುತ್ತಿದ್ದಾರೆ ಎಂದ ಅವರು, ಕೇಂದ್ರದ ನಾಯಕರಿಗೆ ಮಹಾದಾಯಿಗೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ತಿಳಿಸಿ, ಮಹಾದಾಯಿ ಸಮಸ್ಯೆಯನ್ನು ಬಗೆಹರಿಸಿಕೊಂಡು ರಾಜ್ಯದ ಪಾಲಿನ ನೀರನ್ನು ಪಡೆಯುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ವಿಧಾನಮಂಡಲದ ಅಧಿವೇಶನದಲ್ಲಿ ಸರಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತೇವೆ ಎಂಬ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷದವರ ಟೀಕೆ, ಟಿಪ್ಪಣಿಗೆ ನಮ್ಮ ಸ್ವಾಗತವಿದೆ. ನಮ್ಮಿಂದ ತಪ್ಪುಗಳಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News