ಕರ್ನಾಟಕ ಮುಕ್ತ ಪೋಲಿಯೊಗೆ ಕೈಜೋಡಿಸಿ: ಸಿಎಂ ಯಡಿಯೂರಪ್ಪ
ಬೆಂಗಳೂರು, ಜ.31: ಮಕ್ಕಳ ಜೀವರಕ್ಷಣೆಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಕರ್ನಾಟಕ ಮುಕ್ತ ಪೋಲಿಯೊಗೆ ಕೈಜೋಡಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ರವಿವಾರ ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ನ ಈ ಪರಿಸ್ಥಿತಿಯಲ್ಲಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಪೋಲಿಯೊ ಲಸಿಕೆ ನೀಡಲಾಗುತ್ತಿದೆ. 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕುವಂತೆ ಮನವಿ ಮಾಡಿದರು.
ಲಸಿಕೆ ಸಂಬಂಧ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಮಕ್ಕಳ ಜೀವ ಹಾಗೂ ಜೀವನರಕ್ಷಣೆಗೆ ಎರಡು ಹನಿ ಲಸಿಕೆ ಹಾಕಿಸಿ ಎಂದ ಅವರು, ರಾಜ್ಯದಲ್ಲಿ ಒಟ್ಟು 64 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ಯಡಿಯೂರಪ್ಪ ನುಡಿದರು.
ಜನವರಿ 17 ರಂದೇ ಪಲ್ಸ್ ಪೋಲಿಯೊ ಲಸಿಕೆ ನೀಡಬೇಕಿತ್ತು. ಕಾರಣದಿಂದ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇಂದಿನಿಂದ ದೇಶಾದ್ಯಂತ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಕಳೆದ 10-11 ವರ್ಷಗಳಿದಂ ದೇಶದಲ್ಲಿ ಪೋಲಿಯೊ ಸೋಂಕು ಕಂಡುಬಂದಿಲ್ಲ. ಭಾರತದಲ್ಲಿ ಈ ರೋಗ ನಿರ್ಮೂಲನೆಯಾಗಿದೆ. ಆದರೆ, ನೆರೆಯ ರಾಷ್ಟ್ರಗಳಲ್ಲಿ ಪೋಲಿಯೊ ರೋಗ ಇರುವುದರಿಂದ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.