ಜಿಡಿಪಿ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿರುವ ಕೇಂದ್ರ ಸರಕಾರ: ಸಿದ್ದರಾಮಯ್ಯ
ಮೈಸೂರು, ಜ.31: ದೇಶದ ಜಿಡಿಪಿ ಮಟ್ಟ ಪಾತಾಳಕ್ಕೆ ಇಳಿದಿದ್ದರೂ ಎಕಾನಾಮಿಕ್ ಸರ್ವೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಂಡಿಸಲಿರುವ ನಾಳಿನ ಬಜೆಟ್ ನಲ್ಲಿ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಜಿಡಿಪಿ ಮಟ್ಟ ಕುಸಿದಿದ್ದರೂ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ಬಳಿಕ ಜಿಡಿಪಿ ಪ್ರತಿವರ್ಷ ಕುಸಿಯುತ್ತಿದೆ. 2019-20ರಲ್ಲಿ ಜಿಡಿಪಿ 4.2 ಇತ್ತು, ಆಗ ಕೊರೋನ ಇರಲಿಲ್ಲ, ಈ ವರ್ಷ 2020-21 ರಲ್ಲಿ ಜಿಡಿಪಿ -7.7% ಇದೆ. ಅದನ್ನು ಮುಚ್ಚಿಹಾಕಲು 2021-22ಕ್ಕೆ 11% ಆಗಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಡಿಪಿ ವಿಷಯದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ನಗರ ಪ್ರದೇಶದಲ್ಲಿ 9.2% ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ 8.9% ರಷ್ಟು ನಿರುದ್ಯೋಗ ಸಮಸ್ಯೆ ಇದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ವೇಳೆ 2.9% ರಷ್ಟು ಮಾತ್ರ ನಿರುದ್ಯೋಗ ಸಮಸ್ಯೆ ಇತ್ತು. ದೇಶದಲ್ಲಿ 9.5% ರಷ್ಟು ಪದವೀದರರು, ತಾಂತ್ರಿಕ ವಿಭಾಗದ ವಿದ್ಯಾರ್ಥಿ ಗಳು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಕೃಷಿ ಹಾಗೂ ಕೈಗಾರಿಕೆಗೆ ಹೆಚ್ಚು ಒತ್ತು ನೀಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ ಎಂದ ಅವರು, ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರಪತಿ ಭಾಷಣ ತ್ಯಜಿಸುವ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ನನ್ನ ಪ್ರಕಾರ ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ, ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಕಿಡಿಕಾರಿದರು.