×
Ad

ಅನಿವಾರ್ಯ ಕಾರಣಕ್ಕಾಗಿ ಪರಿಷತ್ ನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ: ಕುಮಾರಸ್ವಾಮಿ

Update: 2021-01-31 20:24 IST

ಬಾಗಲಕೋಟೆ, ಜ.31: ಅನಿವಾರ್ಯತೆ ಇದ್ದ ಕಾರಣ ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಹೊಂದಾಣಿಕೆ ಪರಿಷತ್ತಿಗೆ ಮಾತ್ರ ಸೀಮಿತ. ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ನುಡಿದರು.

ಬಿಜೆಪಿ ಜೊತೆ ಹೊಂದಾಣಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು, ಈ ಹಿಂದೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಹೊರಟ್ಟಿ ಅವರನ್ನು ಮೇಲ್ಮನೆ ಸಭಾಪತಿ ಮಾಡುವಂತೆ ಕೇಳಿದಾಗ ಏಕೆ ಒಪ್ಪಿರಲಿಲ್ಲ ಎಂದು ಪ್ರಶ್ನಿಸಿದರು. ಆಗ ಸ್ವತಃ ದೇವೇಗೌಡರೇ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಬೇಕಾದಾಗ ಜೆಡಿಎಸ್ ಪಕ್ಷವನ್ನು ಬಳಸಿ ಬಿಸಾಕುವ ಕಾಂಗ್ರೆಸ್ ನಾಯಕರಿಗೆ ಈಗ ಮಾತನಾಡುವ ಹಕ್ಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಇರುವುದು ನರೇಂದ್ರ ಮೋದಿ, ಯಡಿಯೂರಪ್ಪ ಎಂಬ ಡಬಲ್ ಎಂಜಿನ್‍ಗಳ ಸರಕಾರ. ಆದರೂ ಅಭಿವೃದ್ಧಿ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಬರೀ ಎಂಜಿನ್ ಇವೆ. ಬೋಗಿಗಳೇ ಇಲ್ಲ. ಎಂಜಿನ್ ಜೊತೆಗೆ ಬೋಗಿಗಳ ಚೈನ್‍ಲಿಂಕ್ ತಪ್ಪಿ ಹೋಗಿದೆ ಎಂದು ವ್ಯಂಗ್ಯವಾಡಿದರು.

ಕಷ್ಟಪಟ್ಟು ಸರಕಾರ ಮಾಡಿಕೊಂಡಿದ್ದೀರಿ. ರಾಜ್ಯದ ಅಭಿವೃದ್ಧಿ ಬಿಜೆಪಿ ಇದ್ದರೆ ಮಾತ್ರ ಸಾಧ್ಯ ಎಂಬ ನಿಟ್ಟಿನಲ್ಲಿ ಬಂದಿದ್ದೀರಿ. ಈಗಲೂ ಬುದ್ಧಿ ಮಾತು ಹೇಳುವೆ. ಈ ಖಾತೆ ಕ್ಯಾತೆ ಇವೆಲ್ಲವನ್ನೂ ಬಿಟ್ಟು, ಜನಗಳ ಸಮಸ್ಯೆ ಬಗ್ಗೆ ಗಮನ ಕೊಡಿ. ವೈಯುಕ್ತಿಕ ಸ್ಥಾನಮಾನಗಳಿಗೆ ಪ್ರತಿದಿನ ಹೋರಾಟ ಮಾಡುತ್ತಾ ಕುಳಿತರೆ ಜನರ ಕಷ್ಟ ಕೇಳುವವರು ಯಾರು? ಜನಗಳನ್ನು ಸದಾ ಕಾಲ ಮರುಳು ಮಾಡಲು ಸಾಧ್ಯವಿಲ್ಲ ಎಂದರು.

ವಿಶ್ವನಾಥ್ ಎಲ್ಲಿಗೆ ಹೋಗುತ್ತಾರೆ?: ಕಾಂಗ್ರೆಸ್, ಜೆಡಿಎಸ್ ಮುಗಿಯಿತು. ಈಗ ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇನ್ನು ಯಾವ ಪಕ್ಷ ಸೇರುತ್ತಾರೊ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News