ಜನವಿರೋಧಿ ರೈತ-ಕಾರ್ಮಿಕ ಕಾಯ್ದೆಗಳು ರದ್ದಾಗಲಿ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2021-01-31 18:32 GMT

ಬೆಂಗಳೂರು, ಜ.31: ಕೇಂದ್ರ ಸರಕಾರ ಜಾರಿ ಮಾಡಿರುವ ಜನವಿರೋಧಿ ರೈತ, ದಲಿತ, ಕಾರ್ಮಿಕ, ಸರಕಾರಿ ನೌಕರರ ಮಹಿಳಾ ಮತ್ತು ಮಕ್ಕಳ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಮೈಸೂರಿನ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೂಲ ನಿವಾಸಿ ಸಂಘಟನೆಗಳ ಐಕ್ಯತಾ ವೇದಿಕೆ ವತಿಯಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ದೇಶದ ರೈತ-ಕಾರ್ಮಿಕ ಸಮುದಾಯ ಕೇಂದ್ರ ಸರಕಾರ ನೂತನ ಕಾಯ್ದೆಗಳನ್ನು ವಿರೋಧಿಸುತ್ತಿದೆ. ಕೇಂದ್ರ ಸರಕಾರ ಜನತೆಯ ಮಾತಿಗೆ ಮನ್ನಣೆ ಕೊಟ್ಟು, ಜನವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ದಲಿತ ಸಮುದಾಯಕ್ಕೆ ಮೀಸಲಾಗಿರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಜಾತಿವಾರು ಮೀಸಲಾತಿ, ಕೊಡವ, ಬಂಜಾರ ಹಾಗೂ ಅಲ್ಪಸಂಖ್ಯಾತ ಭಾಷೆಗಳ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಅವರು ಹೇಳಿದ್ದಾರೆ.

ಸಮಾವೇಶದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಸ್ವಾಮೀಜಿ ಚಂದ್ರಶೇಖರನಾಥ ಸ್ವಾಮೀಜಿ, ಬಂತೆ ಮಾತಾ ಮೈತ್ರೇಯ, ಕೊಣೇಶ್ವರ ಸ್ವಾಮಿ, ಸರ್ದಾರ್ ಸೇವಾಲಾಲ್ ಸ್ವಾಮಿ, ಮನೋಹರ್ ಚಂದ್ರಪ್ರಸಾದ್, ದಸಂಸ ಸಂಚಾಲಕ ಜಿಗಣಿ ಶಂಕರ್, ರೇವತಿರಾಜ್, ಹೆಬ್ಬಳ ವೆಂಕಟೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News