×
Ad

ಹುಣಸೋಡಿನಲ್ಲಿ ಸಂಭವಿಸಿದ್ದು ಸ್ಫೋಟವಷ್ಟೇ ಅಲ್ಲ, ಅದು ಬಡ ಕೂಲಿಕಾರರ ಕೊಲೆ: ಸಿದ್ದರಾಮಯ್ಯ ಆರೋಪ

Update: 2021-02-01 16:42 IST

ಬೆಂಗಳೂರು, ಫೆ.1: ಶಿವಮೊಗ್ಗ ಜಿಲ್ಲೆಯ ಹುಣಸೋಡಿನ ಯಶಸ್ ಸ್ಟೋನ್ ಕ್ರಷರ್‌ನಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣವನ್ನು ಹೈಕೋರ್ಟ್ ‌ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಹಾಗೂ ಬೇಜವಾಬ್ದಾರಿತನದಿಂದ ಘಟನೆಗೆ ಕಾರಣರಾದ ಜಿಲ್ಲೆಯ ಎಲ್ಲ‌ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಹುಣಸೋಡಿನಲ್ಲಿ ಸುಮಾರು 1350 ಕೆ.ಜಿ ಸ್ಫೋಟಕ ಸ್ಫೋಟಗೊಂಡು 6 ಜನ ಸಾವಿಗೀಡಾಗಿದ್ದಾರೆ, ಹಲವು ಮನೆಗಳಿಗೆ ಹಾನಿಯಾಗಿದೆ, ಸಮೀಪದ ಗ್ರಾಮಸ್ಥರು ಗಾಯಗೊಂಡಿದ್ದಾರೆ. ಇದು ಪುಲ್ವಾಮಗಿಂತ ದೊಡ್ಡ ಸ್ಫೋಟ. ಪುಲ್ವಾಮದಲ್ಲಿ 250 ಕೆ.ಜಿ ಸ್ಫೋಟಕ ಸ್ಫೋಟಿಸಿದ್ದರೆ, ಇಲ್ಲಿ ಅದರ 5 ಪಟ್ಟಿಗೂ ಹೆಚ್ಚಿನ ಜಿಲೆಟಿನ್ ಸ್ಫೋಟಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 97 ಕ್ರಷರ್‌ಗಳಿಗೆ ಮತ್ತು 76 ಕ್ವಾರಿಗಳಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಪರವಾನಗಿ ಇಲ್ಲದೆ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಕ್ರಷರ್‌ಗಳು ಕೆಲಸ ಮಾಡುತ್ತಿವೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ ಅಂದರೆ ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

''ಹುಣಸೋಡಿನ ಯಶಸ್ ಸ್ಟೋನ್ ಕ್ರಷರ್ ಮೇಲೆ 2018ರ ಏಪ್ರಿಲ್ ತಿಂಗಳಿನಲ್ಲೇ ಅನಧಿಕೃತವಾಗಿ ಸ್ಫೋಟಕ ಬಳಕೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಈ ವಿಚಾರ ಜಿಲ್ಲೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಈವರೆಗೆ ಗಣಿಗಾರಿಕೆ ಮಾಡಲು ಹೇಗೆ ಅವಕಾಶ ನೀಡಿದರು ಆಂದ್ರಪ್ರದೇಶದಿಂದ ಪ್ರತೀ 15 ದಿನಕ್ಕೊಮ್ಮೆ ಲಾರಿಯ ಮೂಲಕ ಅಕ್ರಮವಾಗಿ ಸ್ಫೋಟಕ ತರಲಾಗುತ್ತಿದೆ ಅಂತ ಹುಣಸೋಡಿನ ಗ್ರಾಮಸ್ಥರು ದೂರುತ್ತಿದ್ದಾರೆ. ಆಂದ್ರದಿಂದ ಶಿವಮೊಗ್ಗ ನಡುವೆ ಕನಿಷ್ಠ 10 ಪೊಲೀಸ್ ನಾಕಾಬಂಧಿಗಳಿವೆ. ಒಂದು ಕಡೆಯೂ ಈ ಲಾರಿಗಳ ತಪಾಸಣೆ ನಡೆಸಿ, ವಶಕ್ಕೆ ಪಡೆದಿಲ್ಲ ಅಂದರೆ ರಾಜ್ಯದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ?''

ಸ್ವತಃ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಆಯನೂರ್ ಮಂಜುನಾಥ್ ಅವರೇ ಹುಣಸೋಡಿನಲ್ಲಿ ದುರಂತ ನಡೆದ ಸ್ಥಳಕ್ಕೆ ಭೇಟಿನೀಡಿದ ಸಂದರ್ಭದಲ್ಲಿ 'ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳೆ ಕಾರಣ' ಎಂದು ಆರೋಪ ಮಾಡಿರುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜನವರಿ ತಿಂಗಳ 6ನೇ ತಾರೀಖಿನಂದು ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಹುಣಸೋಡು, ಕಲ್ಲು ಗಂಗೂರು ಪ್ರದೇಶದಲ್ಲಿ ಕಂದಾಯ ಇಲಾಖೆಯು ಗಣಿಗಾರಿಕೆ ಉದ್ದೇಶಕ್ಕೆ ಅನಧಿಕೃತವಾಗಿ ಭೂಮಿ ಮಂಜೂರು ಮಾಡಿದೆ, ಈ ಆದೇಶಗಳನ್ನು ರದ್ದುಪಡಿಸಿ ಎಂದು ಮನವಿ ಮಾಡಿದ್ದರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ, ಹಿರಿಯ ಭೂವಿಜ್ಞಾನಿಗಳ ಗಮನಕ್ಕೂ ಬಂದಿದೆ, ಪೊಲೀಸ್ ಇಲಾಖೆಗೂ ತಿಳಿದಿದೆ, ಯಾರೊಬ್ಬರೂ ಕಾನೂನು ಕ್ರಮ ಜರುಗಿಸದೆ ಕಣ್ಣುಮುಚ್ಚಿ ಕುಳಿತಿರಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ? ಎಂದು ಸಿದ್ದರಾಮಯ್ಯ  ಪ್ರಶ್ನಿಸಿದ್ದಾರೆ.

ಹುಣಸೋಡಿನ ಸ್ಫೋಟ ದುರಂತದಲ್ಲಿ ಮಡಿದ 6 ಜನ ಬಡ ಕೂಲಿಕಾರರ ಸಾವಿನ ಹೊಣೆಯನ್ನು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸುಮ್ಮನಿರಿ ಅಂತ ಹೇಳಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹೊರುತ್ತಾರೆಯೇ? ಹುಣಸೋಡಿನಲ್ಲಿ ಸಂಭವಿಸಿದ್ದು ಬರಿಯ ಸ್ಫೋಟವಷ್ಟೇ ಅಲ್ಲ, ಅದು ಬಡ ಕೂಲಿಕಾರರ ಕೊಲೆ. ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿರುವ ಸುಮಾರು 2000ಕ್ಕೂ ಅಧಿಕ ಅನಧಿಕೃತ ಕ್ರಷರ್, ಕ್ವಾರಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News