ಪರಿಷತ್‍ನಲ್ಲಿ ‘ನೀಲಿಚಿತ್ರ’ ವೀಕ್ಷಣೆ ಆರೋಪ: ನೀತಿ ನಿರೂಪಣಾ ಸಮಿತಿಗೆ ವಹಿಸಲು ಸಭಾಪತಿ ತೀರ್ಮಾನ
ಬೆಂಗಳೂರು, ಫೆ.1: ವಿಧಾನ ಪರಿಷತ್ ಕಲಾಪದ ವೇಳೆಯಲ್ಲಿ ಸದಸ್ಯರೊಬ್ಬರು ಆಕ್ಷೇಪಾರ್ಹ ಚಿತ್ರವನ್ನು ತಮ್ಮ ಮೊಬೈಲ್‍ನಲ್ಲಿ ವೀಕ್ಷಣೆ ಮಾಡುತ್ತಿದ್ದರು ಎಂಬ ಆರೋಪದ ವಿಚಾರವನ್ನು ಪರಿಷತ್‍ನ ಉಪ ಸಭಾಪತಿಯವರ ಅಧ್ಯಕ್ಷತೆಯ ನೀತಿ ನಿರೂಪಣಾ ಸಮಿತಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಸಭಾಪತಿ ಕೆ.ಪ್ರತಾಪ್ ಚಂದ್ರಶೆಟ್ಟಿ ವಿಧಾನ ಪರಿಷತ್‍ಗೆ ತಿಳಿಸಿದರು.
ಸೋಮವಾರ ಪರಿಷತ್‍ನಲ್ಲಿ ಈ ವಿಷಯ ಪ್ರಕಟಿಸಿದ ಅವರು, ಜ.21ರಂದು ಕಲಾಪ ನಡೆಯುವಾಗ ಈ ಸದನದ ಸದಸ್ಯರೊಬ್ಬರು ಆಕ್ಷೇಪಾರ್ಹ ಮಾಹಿತಿಯನ್ನು ತಮ್ಮ ಮೊಬೈಲ್‍ನಲ್ಲಿ ವೀಕ್ಷಣೆ ಮಾಡುತ್ತಿದ್ದರು ಎಂಬುದಾಗಿ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗಿರುವ ಅಂಶ ಪೀಠದ ಗಮನಕ್ಕೆ ಬಂದಿರುತ್ತದೆ. ಇಂಥ ಸುದ್ದಿಗಳಿಂದ ಸದನದ ಗೌರವ ಘಟನೆಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ಈ ವಿಷಯದಲ್ಲಿರುವ ಸತ್ಯಾಸತ್ಯತೆ ತಿಳಿಯಲು ವಿಧಾನ ಪರಿಷತ್ ನೀತಿ ನಿರೂಪಣಾ ಸಮಿತಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸದನದ ಎಲ್ಲ ಸದಸ್ಯರು ಮತ್ತು ಮಾಧ್ಯಮದವರು ಸ್ಥಾನದ ಗೌರವ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದರು. 2020-2021ನೆ ಸಾಲಿನ ವಿಧಾನ ಪರಿಷತ್‍ನ ನೀತಿ ನಿರೂಪಣಾ ಸಮಿತಿಗೆ ಉಪ ಸಭಾಪತಿ ಅಧ್ಯಕ್ಷರಾಗಿರುತ್ತಾರೆ. ಸಮಿತಿಯ ಸದಸ್ಯರಾಗಿ ಬಿ.ಕೆ.ಹರಿಪ್ರಸಾದ್, ಡಾ.ತೇಜಸ್ವಿನಿಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್.ಬಿ.ಸಂಕನೂರ, ಎನ್.ಅಪ್ಪಾಜಿಗೌಡ ಹಾಗೂ ಪಿ.ಆರ್.ರಮೇಶ್ ಅವರು ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.