×
Ad

ಕೇಂದ್ರ ಬಜೆಟ್ 2021: ರಾಜ್ಯ ರಾಜಕೀಯ ನಾಯಕರು, ಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

Update: 2021-02-01 19:36 IST

ಬೆಂಗಳೂರು, ಫೆ. 1: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2021ನೆ ಸಾಲಿನ ಬಜೆಟ್ ಸವಾಲಿನ ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ. ಕೋವಿಡ್-19 ಬಿಕ್ಕಟ್ಟಿನಿಂದ ಸ್ಥಗಿತಗೊಂಡ ಅರ್ಥವ್ಯವಸ್ಥೆ ಮತ್ತೆ ಪುಟಿದೇಳಲು ಪ್ರಧಾನಿ ಮೋದಿ ಸರಕಾರದ ಈ ಬಜೆಟ್ ವೇಗವರ್ಧಕವಾಗಲಿದೆ. ಸಾಂಕ್ರಾಮಿಕದ ಸಂಕಷ್ಟಗಳ ನಡುವೆ ಇದು ಉತ್ತಮ ಬಜೆಟ್ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ವಾವಲಂಬಿ ಭಾರತ ನಿರ್ಮಾಣದ ನಿಟ್ಟಿನಲ್ಲಿ ಬಜೆಟ್‍ನಲ್ಲಿ 13 ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿರುವುದು, ಸ್ವಚ್ಛ ಅಭಿಯಾನಕ್ಕೆ 1.41 ಲಕ್ಷ ಕೋಟಿ ರೂ.ಅನುದಾನ ಒದಗಿಸಿರುವುದನ್ನು ಸ್ವಾಗತಿಸುತ್ತೇನೆ. ಪ್ರಸಕ್ತ ಬಜೆಟ್ ಅರ್ಥವ್ಯವಸ್ಥೆಯ ಪುನಶ್ಚೇತನದೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶಕ್ತಿ ತುಂಬುವ ಸಾಮರ್ಥ್ಯ ಪ್ರದರ್ಶಿಸಿದೆ.

ಕೋವಿಡ್ ಲಸಿಕೆ ಅಭಿಯಾನಕ್ಕೆ 35 ಸಾವಿರ ಕೋಟಿ ರೂ., ಕೃಷಿ ಬಲವರ್ಧನೆ, ಅನ್ನದಾತ ರೈತರ ಅಭಿವೃದ್ಧಿಗೆ ಪ್ರಾಮುಖ್ಯತೆ, ಕೌಶಲ್ಯ ಹಾಗೂ ಮೂಲಸೌಕರ್ಯಾಭಿವೃದ್ಧಿ, ಕೈಗಾರಿಕಾ ಬೆಳವಣಿಗೆಗೆ ಬಜೆಟ್‍ನಲ್ಲಿ ವಿಶೇಷ ಗಮನ ನೀಡಲಾಗಿರುವುದು ಸ್ವಾಗತಾರ್ಹ. ಪ್ರಧಾನಿ ಮೋದಿಯವರ ಕನಸಿನಂತೆ 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಭೂಮಿಕೆ ಒದಗಿಸಲಾಗಿದೆ

ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 16.50 ಲಕ್ಷ ಕೋಟಿ ರೂ.ನಿಗದಿ ಮಾಡಲಾಗಿದೆ. ಎಪಿಎಂಸಿ ಹಾಗೂ ಎಂಎಸ್‍ಪಿ ವ್ಯವಸ್ಥೆ ಮುಂದುವರಿಕೆ ಮತ್ತು ಬಲವರ್ಧನೆಗೆ ಒತ್ತು ನೀಡಲಾಗಿದೆ. ಕೃಷಿ ಮಾರುಕಟ್ಟೆಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ನಿಧಿ, ಸೂಕ್ಷ್ಮ ನೀರಾವರಿ ಯೋಜನೆಯ ಅನುದಾನವನ್ನು 2 ಪಟ್ಟು ಮಾಡಿದ್ದು ಮತ್ತು 22 ಬೆಳೆಗಳಿಗೆ ಮೌಲ್ಯವರ್ಧನೆ ಯೋಜನೆ ಘೋಷಿಸಿದ್ದು, ರೈತರಿಗೆ ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.

ಬೆಂಗಳೂರು ಮೆಟ್ರೊ: ರಾಷ್ಟ್ರೀಯ ರೈಲ್ವೆ ಯೋಜನೆಯಡಿ 1.10 ಲಕ್ಷ ಕೋಟಿ ರೂ. ಒದಗಿಸಿದ್ದು, ಇದರಲ್ಲಿ ಬಂಡವಾಳ ವೆಚ್ಚಕ್ಕೆ 1.07 ಲಕ್ಷ ಕೋಟಿ ರೂ. ಒದಗಿಸಿರುವುದು ಸ್ವಾಗತಾರ್ಹ. ಬೆಂಗಳೂರು ಮೆಟ್ರೋ ಯೋಜನೆಗೆ 14,778 ಕೋಟಿ ರೂ.ಪ್ರಕಟಿಸಲಾಗಿದೆ. ಇದರಿಂದ 58 ಕಿ.ಮೀ. ಹೊಸ ಮಾರ್ಗ ನಿರ್ಮಿಸಲು ಸಾಧ್ಯ. ಇದು ಕರ್ನಾಟಕಕ್ಕೆ ನಮ್ಮವರೇ ಆದ ಅರ್ಥ ಸಚಿವರು ನೀಡಿರುವ ಕೊಡುಗೆಯಾಗಿದೆ.

ಆತ್ಮನಿರ್ಭರ ಭಾರತ: ಪ್ರಧಾನಿಯವರ ಕನಸಿನ ಆತ್ಮನಿರ್ಭರ ಭಾರತ ನನಸಾಗಿಸುವ ದಿಸೆಯಲ್ಲಿ 13 ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿರುವುದು ಮೆಚ್ಚುವಂತಹದ್ದು. ಸ್ವಾವಲಂಬಿ ಭಾರತ ನಿರ್ಮಿಸುವ ದಿಸೆಯಲ್ಲಿ ಆತ್ಮನಿರ್ಭರ ಭಾರತ ಯೋಜನೆ ಒತ್ತಾಸೆಯಾಗಿದೆ. ಅಪೌಷ್ಠಿಕತೆ ವಿರುದ್ಧ ಹೋರಾಡಲು ಮಿಷನ್ ಪೋಷಣ್-2.0 ಯೋಜನೆ ರೂಪಿಸಿರುವುದು ಸಕಾಲಿಕವಾಗಿದೆ.

75 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಿಂದ ವಿನಾಯಿತಿ ನೀಡಿರುವುದು ಶ್ಲಾಘನೀಯ. ಒಟ್ಟಿನಲ್ಲಿ 2021-22ನೆ ಸಾಲಿನ ಕೇಂದ್ರ ಬಜೆಟ್ ಅರ್ಥ ವ್ಯವಸ್ಥೆಯ ಪುನಶ್ಚೇತನದೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಪ್ರದರ್ಶಿಸಿದೆ. ಇದನ್ನು ನಾನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

‘ಕೊರೋನ ಸಂಕಷ್ಟದಲ್ಲೂ ಎಲ್ಲ ವರ್ಗಗಳ, ಸಮುದಾಯಗಳ, ವಲಯಗಳ ಅಭಿವೃದ್ಧಿಗೆ ದೂರದೃಷ್ಠಿಯುಳ್ಳ, ಅತ್ಯುತ್ತಮವಾದ ಹಾಗೂ ಜನಪರವಾದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಬಡವರು, ಪರಿಶಿಷ್ಟರು, ಕೃಷಿಕರು ಮತ್ತು ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ತೆರಿಗೆ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಜಿಎಸ್ಟಿ ಬಿಗಿಗೊಳಿಸಿ ಆದಾಯ ಹೆಚ್ಚಳಕ್ಕೆ ಕ್ರಮವಹಿಸಿದೆ

-ಗೋವಿಂದ ಎಂ.ಕಾರಜೋಳ, ಉಪಮುಖ್ಯಮಂತ್ರಿ

‘ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ಕೊಡುವ ಬಜೆಟನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಇದು ದೇಶದ ಪರಿವರ್ತನೆಗೆ ಪೂರಕ. ನಗರದ ವಾಹನ ದಟ್ಟಣೆ ನಿವಾರಿಸುವಲ್ಲಿ ಮತ್ತು ಬೆಂಗಳೂರಿಗೆ ಇನ್ನಷ್ಟು ಕೈಗಾರಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಕೋವಿಡ್ ಲಸಿಕೆ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸಲು ದೂರದೃಷ್ಟಿಯ ಯೋಜನೆ, ಯುವಕರಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ವಿಶೇಷ ಯೋಜನೆ ಸೇರಿದಂತೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುವುದು ಖಚಿತ. ಆತ್ಮನಿರ್ಭರ ಭಾರತ ಮತ್ತು ವೈಯಕ್ತಿಕ ಸ್ವಾವಲಂಬನೆ ನಿಟ್ಟಿನಲ್ಲಿ ಈ ಬಜೆಟ್ ಮಹತ್ವದ ಹೆಜ್ಜೆ. ಮುಂದಿನ 10 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಈ ಬಜೆಟ್ ಪೂರಕವಾಗಲಿದೆ'

-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

‘ದೇಶದಲ್ಲಿ ಮೂಲಸೌಕರ್ಯಗಳ ಉನ್ನತಿಕರಣ, ರೈತರ ಆದಾಯ ವೃದ್ಧಿ, ಸಾರಿಗೆಗೆ ಆದ್ಯತೆ, ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಯೋಜನೆ, ಆರೋಗ್ಯ, ಕೃಷಿ, ಶಿಕ್ಷಣ ಕ್ಷೇತ್ರಗಳಿಗೂ ವಿಶೇಷ ಅನುದಾನಗಳು ಕೇಂದ್ರ ಬಜೆಟ್ಟಿನ ಪ್ರಮುಖ ಅಂಶಗಳು ಆಗಿರುವುದರಿಂದ ಮುಂದಿನ ದಿನಗಳಲ್ಲಿ ದೇಶವು ಹೊಸ ಅಭಿವೃದ್ಧಿ ಪರ್ವವನ್ನು ಕಾಣಲಿದೆ'

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

‘ದೇಶ ಅತ್ಯಂತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅದರಲ್ಲೂ ವಿಶೇಷವಾಗಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಕಡಿತ ಮಾಡಿಲ್ಲ. ಜೊತೆಗೆ ಈ ಸಾಲಿನಲ್ಲಿ ಹೊಸದಾಗಿ ನಗರ ಮತ್ತು ಪಟ್ಟಣ ಪ್ರದೇಶಕ್ಕೂ ಮನೆಮನೆಗೆ ಗಂಗೆ ಯೋಜನೆಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ. ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿ ಮನೆಗೂ ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಪ್ರತಿದಿನ, ಪ್ರತಿ ವ್ಯಕ್ತಿಗೆ ಕನಿಷ್ಠ 55 ಎಲ್‍ಪಿಸಿಡಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಒಳ್ಳೆಯದು'

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ಉನ್ನತ ಶಿಕ್ಷಣಕ್ಕೆ ಉತ್ತೇಜನ: ‘ಸಂಶೋಧನೆಗೆ ಒತ್ತು ನೀಡಿರುವ ಕೇಂದ್ರ ಆಯವ್ಯಯ ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂ.ವೆಚ್ಚ ಮಾಡುವುದಾಗಿ ಘೋಷಿಸಿದೆ. ಜತೆಗೆ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ ಮಾಡುವುದಾಗಿ ಹೇಳಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಹೊತ್ತಿನಲ್ಲಿ ಗುಣಮಟ್ಟದ ಶಿಕ್ಷಣ ಉದ್ದೇಶ ಸಾಕಾರಕ್ಕಾಗಿ ಈ ಉಪಕ್ರಮ ದೊಡ್ಡ ಹೆಜ್ಜೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆ, ಗುಣಮಟ್ಟ ನಿಗದಿ ಮಾಡುವುದು, ಮಾನ್ಯತೆ, ನಿಯಂತ್ರಣ ಹಾಗೂ ಹಣಕಾಸು ನೆರವಿನ ನಾಲ್ಕು ಪ್ರತ್ಯೇಕ ವಿಭಾಗಗಳಿರುತ್ತವೆ. ರಾಷ್ಟ್ರೀಯ ಉನ್ನತ ಶಿಕ್ಷಣ ಆಯೋಗ ರಚನೆಯಾದರೆ ಉನ್ನತ ಶಿಕ್ಷಣಕ್ಕೆ ಆನೆ ಬಲ ಬರಲಿದೆ'

-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

‘ಸ್ವಾವಲಂಬಿ-ಸಶಕ್ತ ಭಾರತದ ಪರಿಕಲ್ಪನೆಯೊಂದಿಗೆ 2021-22ರ ಕೇಂದ್ರ ಬಜೆಟ್ ಮಂಡಿಸಲಾಗಿದೆ. ಕೋವಿಡ್ ವಿರುದ್ಧ ಸ್ವದೇಶಿ ಲಸಿಕೆ ಉತ್ಪಾದನೆಗೆ ಹೆಚ್ಚು ಹಣ ನೀಡಿದ್ದು, ಇದರಿಂದಾಗಿ ಜನರಲ್ಲಿದ್ದ ಆತಂಕ ನಿವಾರಣೆಯಾಗಿ, ಧೈರ್ಯ ಹೆಚ್ಚಳವಾಗಲಿದೆ. ಇದು ಉತ್ಪಾದಕತಾ ವೃದ್ಧಿಗೆ ಪೂರಕ. ಮೂಲಸೌಕರ್ಯ ವೃದ್ಧಿ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹಣ ಹೂಡಿಕೆ, ಮೆಟ್ರೊ, ರೈಲ್ವೆ, ಬಂದರು ಅಭಿವೃದ್ಧಿಯ ಕ್ರಮದಿಂದ ದೇಶವು ಪ್ರಗತಿಪಥದಲ್ಲಿ ನಡೆಯಲಿದೆ. ಭವಿಷ್ಯದ ಚಿಂತನೆಯನ್ನು ಮನಸ್ಸಿನಲ್ಲಿಟ್ಟು ಯೋಜನೆಗಳನ್ನು ರೂಪಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಪೂರಕ ಚಿಂತನೆಗಳೂ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.

-ಸಿ.ಟಿ.ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

‘ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ರೋಗನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ ಆಧಾರವಾಗಿದೆ. ಕೃಷಿಗೆ ಹೆಚ್ಚಿನ ಒತ್ತು ನೀಡಿ ಬಜೆಟ್ ಮಂಡಿಸಿರುವುದು ಶ್ಲಾಘನೀಯ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 16.50 ಲಕ್ಷ ಕೋಟಿ ರೂ.ಅನುದಾನ ಮೀಸಲಿಟ್ಟು, ಎಪಿಎಂಸಿ ಹಾಗೂ ಎಂಎಸ್‍ಪಿ ವ್ಯವಸ್ಥೆ ಮುಂದುವರಿಕೆ ಮತ್ತು ಬಲವರ್ಧನೆಗೆ ಒತ್ತು ನೀಡಲಾಗಿದೆ'

-ಬಿ.ಸಿ.ಪಾಟೀಲ್, ಕೃಷಿ ಸಚಿವ

ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣಕ್ಕೆ ವಿರೋಧ

‘ಶಿಕ್ಷಣ, ಆರೋಗ್ಯ ಒಳಗೊಂಡಂತೆ 42 ಸೆಸ್‍ಗಳನ್ನು ಜಡಿದ ಮೋದಿ ಸರಕಾರ ಆ ಮೂಲಕ 2.5 ಲಕ್ಷ ಕೋಟಿ ರೂ.ಸಂಗ್ರಹ ಮಾಡಿತ್ತು. ಆದರೆ, ಆ ಮೊತ್ತವನ್ನು ಮರಳಿ ಸಂಬಂದಪಟ್ಟ ಇಲಾಖೆಗಳ ಅಭಿವೃದ್ದಿಗೆ ವೆಚ್ಚ ಮಾಡದೆ ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ. ಯುಜಿಸಿ ರದ್ದುಗೊಳಿಸಿ ‘ಉನ್ನತ ಶಿಕ್ಷಣ ಆಯೋಗ' ರಚಿಸಲು ಈ ವರ್ಷ ಚಾಲನೆ. ಶಿಕ್ಷಣದ ಕೇಂದ್ರೀಕರಣಕ್ಕೂ ಚಾಲನೆ. ಇನ್ನು ವಿವಿ ಧನ ಸಹಾಯ ಮತ್ತು ಅನುದಾನವು ನೇರವಾಗಿ ಕೇಂದ್ರ ಶಿಕ್ಷಣ ಇಲಾಖೆಯ ಸುಪರ್ದಿಗೆ ಹೋಗುತ್ತದೆ. ಅಲ್ಲಿಗೆ ಕತೆ ಮುಗೀತು. ಮುಂದಿನ 6 ವರ್ಷಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗಾಗಿ 35,219 ಕೋಟಿ ರೂ.ವೆಚ್ಚ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದು ಎಂತಹ ವಂಚನೆ, ಮೋಸವೆಂದರೆ, ಮೊದಲಿಗೆ ಇದು 1944ರಿಂದ ಜಾರಿಯಲ್ಲಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆ. ಇದರಲ್ಲಿ ಹೊಸದೇನೂ ಇಲ್ಲ. ಇದು ಬಡ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚನೆ ಮಾಡುವ ಶಿಕ್ಷಣ ವಿರೋಧಿ ಬಜೆಟ್ ಆಗಿದೆ. ದೇಶದ ಸಮಗ್ರ ಶಿಕ್ಷಣ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್‍ನಲ್ಲಿ ಕನಿಷ್ಠ ಶೇ.10ರಷ್ಟು ಮೀಸಲಿಡಬೇಕು ಎಂಬ ದಶಕಗಳ ಬೇಡಿಕೆಗೆ ಕೇಂದ್ರ ಸರಕಾರ ಆದ್ಯತೆ ನೀಡದಿರುವುದು ಅನಿರೀಕ್ಷಿತವೇನಲ್ಲ. ದುಡ್ಡಿದ್ದವರಿಗೆ ಶಿಕ್ಷಣವನ್ನು ಮಾರಾಟ ಮಾಡುವ ಶಿಕ್ಷಣದ ಖಾಸಗೀಕರಣ ಕೇಂದ್ರೀಕರಣ ತೀವ್ರಗೊಳಿಸುವ ಉದ್ದೇಶಗಳು ಎದ್ದು ಕಾಣುತ್ತಿವೆ.

-ವಾಸುದೇವರೆಡ್ಡಿ ಕೆ., ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ

ಆತ್ಮವಂಚನೆಯ ಬಜೆಟ್

ಎಲ್ಲವನ್ನೂ ಏರಿಸಿರುವ ಕೇಂದ್ರ ತನ್ನದು ‘ಆತ್ಮನಿರ್ಭರ ಭಾರತ’ ರೂಪಿಸುವ ಬಜೆಟ್ ಎಂದು ಆತ್ಮವಂಚನೆಯ ಮಾತುಗಳನ್ನಾಡುತ್ತಿದೆ. ಅಲ್ಲದೆ, ಇಷ್ಟು ಏರಿಕೆಗಳನ್ನು ಕಂಡ ಭಾರತವು ಆತ್ಮನಿರ್ಭರತೆಯನ್ನು ಸಾಧಿಸಲು ಸಾಧ್ಯವೇ? ಡೀಸೆಲ್, ಪೆಟ್ರೋಲ್ ಈಗಾಗಲೇ ಏರುತ್ತಿದೆ. ಅದರ ಜೊತೆಗೆ ಈಗಿನ ಭಾರಿ ಏರಿಕೆ ಪರಿಣಾಮ ಏನಾಗಲಿದೆ ಎಂದು ಕೇಂದ್ರ ಯೋಚಿಸಿದಂತೆ ಇಲ್ಲ. ಇನ್ನು ಏರಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಕೃಷಿ ಸೆಸ್‍ಅನ್ನು ಕೇಂದ್ರ ಸರಕಾರ ಮುಂದಿಟ್ಟಿದೆ. ಒಂದೆಡೆ ರೈತರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಸರಕಾರ ತನ್ನ ರಕ್ಷಣೆಗೆ ಮಾತ್ರ ಕೃಷಿ ಕ್ಷೇತ್ರದ ನೆರವು ಪಡೆದಂತಿದೆ. ಕೃಷಿ ಸೆಸ್‍ನಿಂದ ಸಂಗ್ರಹವಾಗುವ ಹಣವನ್ನು ಕೃಷಿ ರಂಗದ ಅಭಿವೃದ್ದಿಗೆ ಬಳಸಲಾಗುತ್ತದೆಯೇ ಎಂಬುದರ ವಿವರಣೆ ಬಜೆಟ್‍ನಲ್ಲಿ ಎಲ್ಲಿದೆ?

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕೇಂದ್ರದ ಬಜೆಟ್- ಬರ್ಬಾದ್

ಕೇಂದ್ರ ಸರಕಾರದ ಈ ಬಾರಿಯ ಬಜೆಟ್ ಬರ್ಬಾದ್ ಆಗಿದೆ. ಬಜೆಟ್ ಕುರಿತು ನನಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಹೇಳಿದ್ದೆ. ಅದು ನಿಜವಾಗಿದೆ. ಇನ್ನು, ಆತ್ಮ ನಿರ್ಭರ ಯೋಜನೆಯಲ್ಲಿ ಹಣಕಾಸು ಸಚಿವರು ಮೂರು ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬಜೆಟ್ ಅದರ ಮುಂದುವರಿದ ಭಾಗವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಆತ್ಮ ಬರ್ಬರ ಬಜೆಟ್ ಕೊಟ್ಟಿದ್ದಾರೆ. ಅದು ಆತ್ಮ ಬರ್ಬಾದ್ (ನಾಶ, ದಿವಾಳಿ) ಬಜೆಟ್ ಆಗಿದೆ.

-ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ

ರೈತರ ಮೂಗಿಗೆ ತುಪ್ಪ: ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಪೂರಕ ಯೋಜನೆಗಳಿಲ್ಲದ, ರೈತರ ಮೂಗಿಗೆ ತುಪ್ಪ ಸವರುವ, ರೈತರಿಗೆ ಸಂಕಷ್ಟತರುವ ಬಜೆಟ್. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಏರಿಕೆ ಮಾಡುತ್ತೇನೆ. ಆದಾಯ ದ್ವಿಗುಣಗೂಳಿಸುತ್ತೇವೆ ಎನ್ನುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ.

-ಕುರುಬೂರು ಶಾಂತಕುಮಾರ್, ರೈತ ಮುಖಂಡ

ಗಮನಾರ್ಹ ಕೊಡುಗೆ ಇಲ್ಲ: ಇದೊಂದು ಸಾಮಾನ್ಯ ಬಜೆಟ್, ಸಾಮಾನ್ಯ ಜನರಿಗೆ ಈ ಬಜೆಟ್‍ನಿಂದ ಏನೂ ಪ್ರಯೋಜವಿಲ್ಲ. ಬಜೆಟ್‍ನಲ್ಲಿ ದೇಶದ ಹಣಕಾಸು ವ್ಯವಸ್ಥೆ ಸರಿತೂಗಿಸಲಾಗಿದೆ. ಇನ್ನು, ಕೇಂದ್ರ ಬಜೆಟ್‍ನಲ್ಲಿ ಬೆಂಗಳೂರು ಮೆಟ್ರೋ ಒಂದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಗಮನಾರ್ಹ ಕೊಡುಗೆ ಕರ್ನಾಟಕಕ್ಕೆ ಬಂದಿಲ್ಲ.

-ಪೆರಿಕಾಲ್ ಎಂ.ಸುಂದರ್, ಅಧ್ಯಕ್ಷ, ಎಫ್‍ಕೆಸಿಸಿಐ

ಸಣ್ಣ ಉದ್ಯಮಗಳಿಗೆ ಸಹಕಾರ: ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ ತೊಂದರೆಗೊಳಗಾದ ಸಣ್ಣಉದ್ಯಮಕ್ಕೆ ಸಹಾಯ ಮಾಡಲು ವಿವಿಧ ಕ್ರಮಗಳನ್ನು ಪ್ರಕಟಿಸಿದೆ. ಎಂಎಸ್‍ಎಂಇಗಳಿಗೆ ಕಳೆದ ವರ್ಷಕ್ಕಿಂತ ಎರಡರಷ್ಟು ಮೊತ್ತ 15,700 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಎಂಎಸ್‍ಎಂಇಗಳ ಉತ್ಪಾದಿಸುವ ಉಕ್ಕಿನ ತಿರುಪು ಮೊಳೆಗಳು, ಪ್ಲಾಸ್ಟಿಕ್ ಸಾಮಾನುಗಳು, ಸಿದ್ಧಪಡಿಸಿದ ಸಂಶ್ಲೇಷಿತ ರತ್ನದ ಕಲ್ಲುಗಳು, ಸೀಗಡಿ ಫೀಡ್‍ನಂತಹ ದೇಶೀಯ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವ, ಚರ್ಮ ಮತ್ತು ಕರಕುಶಲ ವಸ್ತುಗಳ ರಫ್ತುದಾರರಿಗೆ ಪ್ರೋತ್ಸಾಹಕವಾಗಿ ಸುಂಕರಹಿತ ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ವಿನಾಯಿತಿಯನ್ನು ತರ್ಕಬದ್ಧಗೊಳಿಸುವ ಉಲ್ಲೇಖವಿದೆ.

-ಕೆ.ಬಿ.ಅರಸಪ್ಪ, ಅಧ್ಯಕ್ಷ, ಕಾಸಿಯಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News