ಒಂಬತ್ತು ಸಾವಿರ ವಸತಿಗಳ ಅಕ್ರಮ ಹಂಚಿಕೆ: 7 ಗ್ರಾಪಂ ಪಿಡಿಓಗಳ ಅಮಾನತು

Update: 2021-03-12 12:21 GMT

ಬೀದರ್, ಫೆ.1: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ 9 ಸಾವಿರ ವಸತಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ 7 ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತಂತೆ ಬೀದರ್ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರ ಕುಮಾರ್ ಆದೇಶ ಹೊರಡಿಸಿದ್ದು, ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ 2015 ರಿಂದ 2019ರವರೆಗೆ ಅನುಷ್ಠಾನಗೊಂಡ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಬಾಳೂರು ಗ್ರಾಪಂ ಪಿಡಿಓ ಸಂಗಮೇಶ ಸಾವಳೆ, ಬೀರಿ ಗ್ರಾ.ಪಂ ಪಿಡಿಓ ಮಲ್ಲೇಶ್ ಮಾರುತಿ, ಜ್ಯಾಂತಿ ಗ್ರಾ.ಪಂ ಪಿಡಿಓ ರೇವಪ್ಪ, ಮೊರಂಬಿ ಗ್ರಾ.ಪಂ ಪಿಡಿಓ ರೇಖಾ, ತಳವಾಡ ಕೆ ಗ್ರಾ.ಪಂ ಪಿಡಿಓ ಚಂದ್ರಶೇಖರ್, ವರವಟ್ಟಿ ಗ್ರಾ.ಪಂ ಪಿಡಿಓ ಸಂಶೋಷ್ ಹಾಗೂ ಎಣಕೂರು ಗ್ರಾ.ಪಂ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ಎಸಗಲಾಗಿದೆ. ನಿಜವಾದ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗಿಲ್ಲ ಎಂಬುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದ ಭಗವಂತ್ ಖೂಬಾ ಆರೋಪ ಮಾಡಿದ್ದರು. ಇದರಿಂದಾಗಿ ರಾಜ್ಯ ತಂಡ ತನಿಖೆ ನಡೆಸಿತ್ತು. ಈ ವೇಳೆ 26 ಸಾವಿರ ವಸತಿಗಳಲ್ಲಿ 9 ಸಾವಿರ ವಸತಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದಾಗಿ ವರದಿಯನ್ನು ನೀಡಲಾಗಿತ್ತು. ಈ ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಭಾಲ್ಕಿ ತಾಲೂಕಿನಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ಎಸಗಿರುವ 7 ಗ್ರಾಮ ಪಂಚಾಯತ್ ಗಳ ಪಿಡಿಓಗಳನ್ನು ಅಮಾನತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News