×
Ad

ಹಾಸ್ಟೆಲ್‍ಗಳಲ್ಲಿ ಮನುಷ್ಯರು ಮಲಗಲು ಸಾಧ್ಯವೇ?: ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಪ್ರಶ್ನೆ

Update: 2021-02-01 19:56 IST

ಬೆಂಗಳೂರು, ಫೆ. 1: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಾಸ್ಟೆಲ್‍ಗಳ ಮಾದರಿಯಲ್ಲೆ ರಾಜ್ಯದಲ್ಲಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಿಗೆ ಮೂಲಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿದ ಉತ್ತರದಿಂದ ಕೆರಳಿದ ಶಿವಲಿಂಗೇಗೌಡ, ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಮನುಷ್ಯರು ವಾಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಖಾಸಗಿ ಕಟ್ಟಡಗಳಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಿದ್ದು, ಅಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಹೀಗಾಗಿ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ. ಅಲ್ಲದೆ, ಹಾಸ್ಟೆಲ್‍ಗೆ ಸ್ವಂತ ಕಟ್ಟಡ ನಿರ್ಮಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಲಿಂಗೇಗೌಡ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್ ಕಾಗೇರಿ, ಹಿಂದುಳಿದ ವರ್ಗಗಳ ಮಕ್ಕಳ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಕೂಡಲೇ ನಿವೇಶನ ಒದಗಿಸಲು ಜಿಲ್ಲಾಧಿಕಾರಿಗಳು, ತಹಶಿಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ. ಇಲ್ಲವಾದರೆ, ಖಾಸಗಿ ಲಾಬಿಗೆ ಮಣಿದು ಕೆಲವರ ಹಿತಾಸಕ್ತಿಗಾಗಿ ಮಕ್ಕಳಿಗೆ ಸೂಕ್ತ ವ್ಯವಸ್ಥೆಗಳೇ ಸಿಗುವುದಿಲ್ಲ ಎಂದು ಚಾಟಿ ಬೀಸಿದರು.

ಬಳಿಕ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ 1,031 ಹಾಸ್ಟೆಲ್ ಕಟ್ಟಡಗಳ ಪೈಕಿ ಈಗಾಗಲೇ 695 ಕಟ್ಟಡ ನಿರ್ಮಾಣಕ್ಕೆ ನಿವೇಶನಗಳನ್ನು ಸ್ಥಳೀಯ ಸಂಸ್ಥೆಗಳು ಒದಗಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನದ ಲಭ್ಯತೆ ಆಧರಿಸಿ ಕ್ರಮ ವಹಿಸಲಾಗುವುದು. ಅಲ್ಲದೆ, ಖಾಸಗಿ ಕಟ್ಟಡಗಳಲ್ಲಿ ಹಾಸ್ಟೆಲ್‍ಗಳಲ್ಲಿ ಸೂಕ್ತ ಮೂಲಸೌಲಭ್ಯ ಕಲ್ಪಿಸಲು ಸರಕಾರ ಆಸ್ಥೆ ವಹಿಸಲಿದೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News