ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರದ ಜೊತೆಗೆ ಮಾಲಕತ್ವ ನೀಡಲು ಕ್ರಮ: ವಸತಿ ಸಚಿವ ವಿ.ಸೋಮಣ್ಣ

Update: 2021-02-01 14:42 GMT

ಬೆಂಗಳೂರು, ಫೆ. 1: ರಾಜ್ಯ ಸರಕಾರದ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದರ ಜೊತೆಗೆ ಅವರು ಮಾಲಕತ್ವ ನೀಡಲು ಸರಕಾರ ಸೂಕ್ರ ಕ್ರಮ ವಹಿಸಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಂಗಳೂರು ನಗರದ 28 ಕ್ಷೇತ್ರಗಳಲ್ಲಿ ಖುದ್ದು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.

ಎಲ್ಲರಿಗೂ ಮನೆ ನಿರ್ಮಿಸಿಕೊಡುವುದು ಪ್ರಧಾನ ಮೋದಿಯವರ ಆಶಯವೂ ಆಗಿದೆ. ಇನ್ನೂ 8ರಿಂದ 10 ದಿನಗಳ ಒಳಗಾಗಿ ಇದಕ್ಕೆ ಹೊಸ ರೂಪ ನೀಡುವುದಲ್ಲದೆ, ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ ಸಂಪನ್ಮೂಲ ಕ್ರೋಢೀಕರಿಸಿ ಶಾಸಕರ ಅಧ್ಯಕ್ಷತೆಯಲ್ಲಿ ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದರು.

ಹೌಸಿಂಗ್ ಫಾರ್ ಕೆಲವರಿಗೆ ಘೋಷಣೆ ತಪ್ಪಿಸಿ: ವಸತಿ ಸೌಲಭ್ಯ ಎಲ್ಲರಿಗೂ ಎಂಬ ಘೋಷಣೆ ಕೆಲವರಿಗೆ ಸೀಮಿತವಾಗಿದೆ. ಇದನ್ನು ಕೂಡಲೇ ತಪ್ಪಿಸಿ ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡಿ. ಬಡವರಿಗೆ ಮನೆ ನಿರ್ಮಿಸಿಕೊಡಿ, ಬೇಕಾಬಿಟ್ಟಿ ನೀಡುವುದನ್ನು ತಪ್ಪಿಸಿ ಎಂದು ಆಡಳಿತ ಪಕ್ಷದ ಸದಸ್ಯ ಅರಗ ಜ್ಞಾನೇಂದ್ರ ಆಗ್ರಹಿಸಿದರು.

ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 17 ಕೊಳಚೆ ಪ್ರದೇಶಗಳಿದ್ದು, ಸದರಿ ಕೊಳಚೆ ಪ್ರದೇಶದಲ್ಲಿ ಹಲವು ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದು, ಇವರುಗಳಿಗೆ ಹಕ್ಕುಪತ್ರ ನೀಡಿಲ್ಲ. ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಯಿದೆ ಪ್ರಕಾರ 12 ಘೋಷಿತ ಕೊಳಚೆ ಪ್ರದೇಶಗಳಿರುತ್ತವೆ. ಸರಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಾಲಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಜಮೀನನ್ನು ಮಂಡಳಿಗೆ ಹಸ್ತಾಂತರಿಸಲು ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆಯಲಾಗಿದೆ. ಮಂಡಳಿಗೆ ಜಮೀನನ್ನು ಹಸ್ತಾಂತರಿಸಿದ ನಂತರ ಸರಕಾರದ ಆದೇಶದಂತೆ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News